ವೀರಾಜಪೇಟೆ, ಆ. ೨೨: ವೀರಾಜಪೇಟೆಯ ವ್ಯಕ್ತಿಯೋರ್ವರು ಕಾರು ಅವಘಡದಲ್ಲಿ ದುರಂತ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ತಮ್ಮ ಪುತ್ರನನ್ನು ವಿದೇಶಕ್ಕೆ ಕಳುಹಿಸಲು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ವೀರಾಜಪೇಟೆಯ ಪೆರಂಬಾಡಿ ನಿವಾಸಿ ಬಿ.ಆರ್. ಗಣೇಶ್ (೬೨) ತೆರಳಿದ್ದರು. ಇಂದು ಬೆಳಿಗ್ಗೆ ಮರಳಿ ವೀರಾಜಪೇಟೆಗೆ ಬರುತ್ತಿದ್ದ ಸಂದರ್ಭ ಸುಮಾರು ಹನ್ನೊಂದು ಗಂಟೆಗೆ ಸಂಪಾಜೆ - ಕಲ್ಲುಗುಂಡಿ ಬಳಿಯ ದೊಡ್ಡಡ್ಕ ಎಂಬಲ್ಲಿ ನಿಯಂತ್ರಣ ಕಳೆದುಕೊಂಡ (ಕೆಎ೧೨-ಪಿ ೮೭೫೬) ಮಾರುತಿ ಸ್ವಿಫ್ಟ್ ಡಿಜೈರ್ ಕಾರು ರಸ್ತೆ ಬದಿಯ ರಬ್ಬರ್ ತೋಟಕ್ಕೆ ಮಗುಚಿಕೊಂಡಿದೆ. ತಕ್ಷಣವೇ ಅಲ್ಲಿನ ಸಾರ್ವಜನಿಕರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂರು ಗಂಟೆಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ವೀರಾಜಪೇಟೆಯ ಪೆರಂಬಾಡಿಗೆ ಮೃತದೇಹವನ್ನು ಸಾಗಿಸಲಾಗಿದೆ. ಮೃತರು ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಕೊಡಗು ಮೋಟರ‍್ಸ್ ಸಂಘದ ಮಾಜಿ ಗೌರವ ಅಧ್ಯಕ್ಷರಾಗಿದ್ದರು. ಕಾರಿನಲ್ಲಿದ್ದ ಮೃತರ ಮಗಳು ಮತ್ತು ಅಳಿಯನಿಗೆ ಸಣ್ಣಪುಟ್ಟ ಗಾಯವಾಗಿದ್ದು ಬದುಕುಳಿದಿದ್ದಾರೆ. - ರವಿ