ಮಡಿಕೇರಿ, ಆ. ೨೨: ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ಒಟ್ಟು ರೂ. ೧೩೦೭೪.೪೪ ಲಕ್ಷಗಳ ವಹಿವಾಟು ನಡೆಸಿದ್ದು, ರೂ. ೫೪.೦೮ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದಸ್ಯರಿಗೆ ಶೇ.೧೫ರಷ್ಟು ಡಿವಿಡೆಂಡ್ ನೀಡುವ ಬಗ್ಗೆ ವಾರ್ಷಿಕ ಮಹಾಸಭೆಯ ಒಪ್ಪಿಗೆಗೆ ಮಂಡಿಸಲು ತೀರ್ಮಾನಿಸಲಾಗಿದೆ ಎಂದರು.
ಸAಘದಲ್ಲಿ ಎ ತರಗತಿಯ ೧೧೬೫ ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳ ರೂ.೧೧೯.೮೪ ಲಕ್ಷಗಳಷ್ಟಿದೆ. ಕ್ಷೇಮ ನಿಧಿ ಸೇರಿ ಇತರ ನಿಧಿಗಳು ರೂ. ೩೫೫.೩೮ ಲಕ್ಷ ಹಾಗೂ ನಿರಖು ಠೇವಣಿ ಸಂಚಯ ಠೇವಣಿ ಮತ್ತು ಇತರ ಠೇವಣಿ ಸೇರಿ ಒಟ್ಟು ರೂ ೧೬೯೮.೮೭ ಲಕ್ಷಗಳಿವೆ.
ಸಂಘದ ಬಂಡವಾಳವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರುಖು ಠೇವಣಿ ಮತ್ತಿತರ ಸಹಕಾರ ಸಂಸ್ಥೆಯಲ್ಲಿ ಪಾಲು ಮತ್ತು ನಿರಖು ಠೇವಣಿ ರೂಪದಲ್ಲಿ ಒಟ್ಟು ರೂ.೬೪೧.೧೯ ಲಕ್ಷಗಳನ್ನು ಠೇವಣಿ ಮಾಡಲಾಗಿದೆ. ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ ೨೦೨೩-೨೪ನೇ ಸಾಲಿನಲ್ಲಿ ರೂ.೧೯೨೬.೩೩ ಲಕ್ಷÀ ಸಾಲವನ್ನು ವಿತರಿಸಲಾಗಿದೆ.
ಸಂಘದಲ್ಲಿ ಎಂ.ಸಿ.ಎಫ್ ಮದ್ರಾಸ್ ಫರ್ಟಿಲೈಸರ್ಸ್, ಇಂಡಿಯನ್ ಪೊಟ್ಯಾಷ್ ಇನ್ನೊ, ಫ್ಯಾಕ್ಟ್, ಪ್ಯೂಚರ್ ಫರ್ಟಿಲೈಸರ್ಸ್ ಜುವಾರಿ, ಕೋರಮಂಡಲ್, ಸ್ಟೇನ್ಸ್, ಸಂಸ್ಥೆಗಳ ಸಗಟು ಮತ್ತು ರಿಟೇಲ್ ಲೈಸನ್ಸ್ ಹೊಂದಿದ್ದು, ನೇರವಾಗಿ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ೨೦೨೩-೨೪ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರ ಅಗತ್ಯ ಸಾಮಗ್ರಿ ಬಾಪ್ತು ರೂ.೪೮೬.೭೦ ಲಕ್ಷಗಳ ವಹಿವಾಟು ನಡೆಸಿ ರೂ.೧೯.೮೧ ಲಕ್ಷಗಳ ವ್ಯಾಪಾರ ಲಾಭಗಳಿಸಲಾಗಿದೆ.
ಸಂಘದ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಮಣ್ಣು ಪರೀಕ್ಷಾ ಕೇಂದ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೈತ ಸದಸ್ಯರಿಗೆ ಅನುಕೂಲವಾಗುವಂತೆ ಕಾಫಿ ಗುಣಮಟ್ಟ ಪರಿಶೀಲನಾ ಯಂತ್ರವನ್ನು ಅಳವಡಿಸಲಾಗಿದೆ. ಸಂಘದ ಮುಖ್ಯ ಕಛೇರಿ ಕಟ್ಟಡದ ಮೇಲ್ಭಾಗದಲ್ಲಿ ಪುಣ್ಯಕೋಟಿ ಅತಿಥಿಗೃಹ ನಿರ್ಮಿಸಿ ಬಾಡಿಗೆಗೆ ನೀಡಲಾಗುತ್ತಿದೆ. ಇ-ಸ್ಟಾö್ಯಂಪ್ ಮತ್ತು ಆರ್ಟಿಸಿ ಸೌಲಭ್ಯವನ್ನು ಕೂಡ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ.
ಸಂಘದ ಈರಳೆವಳಮುಡಿ ಶಾಖೆಯಲ್ಲಿ ಚೋಳಪಂಡ ಕುಟುಂಬಸ್ಥರು ದಾನವಾಗಿ ನೀಡಿದ ಜಾಗದಲ್ಲಿ ೧೯೩೦ರಲ್ಲಿ ನಿರ್ಮಿಸಲಾದ ಕಟ್ಟಡ ಶಿಥಿಲಾವಸ್ಥೆಗೊಂಡು ಬೀಳುವ ಹಂತದಲ್ಲಿತ್ತು. ಅದನ್ನು ದುರಸ್ತಿ ಮತ್ತು ನವೀಕರಣಗೊಳಿಸಿ ನ್ಯಾಯಬೆಲೆ ಅಂಗಡಿ ಹಾಗೂ ಮೂರು ಕೊಠಡಿಗಳನ್ನು ಬಾಡಿಗೆಗೆ ನೀಡಲಾಗಿದೆ ಎಂದು ಮಣಿ ಉತ್ತಪ್ಪ ಮಾಹಿತಿ ನೀಡಿದರು.
ತಾವು ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭ ನಷ್ಟದಲ್ಲಿದ್ದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಎಲ್ಲರ ಸಹಕಾರದಿಂದ ಲಾಭದೆಡೆಗೆ ಕೊಂಡೊಯ್ಯಲಾಗಿದೆ. ರಾಜಕೀಯ ರಹಿತ ಆಡಳಿತ ಮತ್ತು ಒಗ್ಗಟ್ಟಿನಿಂದ ಮಾತ್ರ ಇದು ಸಾಧ್ಯವಾಗಿದೆ. ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.
ಮಹಾಸಭೆ
ಸAಘದ ೪೭ನೇ ಮಹಾಸಭೆ ತಾ.೨೫ರಂದು ಬೆಳಿಗ್ಗೆ ೧೦ಗಂಟೆಗೆ ಸಂಘದ ಶ್ರೀ ನರೇಂದ್ರಮೋದಿ ಭವನದಲ್ಲಿ ನಡೆಯಲಿದೆ ಎಂದು ಮಣಿ ಉತ್ತಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪೇರಿಯನ ಎಸ್. ಪೂಣಚ್ಚ, ನಿರ್ದೇಶಕರುಗಳಾದ ಕೊಂಗೇಟೀರ ವಾಣಿ ಕಾಳಪ್ಪ, ಬಿ.ಎಂ. ಕಾಶಿ, ಮುಳ್ಳಂಡ ಎ. ಮಾಯಮ್ಮ ಹಾಗೂ ಅಕ್ಕಾರಿ ಆರ್. ದಯಾನಂದ ಉಪಸ್ಥಿತರಿದ್ದರು.