ಮಡಿಕೇರಿ, ಆ. ೨೨: ಮಡಿಕೇರಿ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಮುಂದಿನ ವಿಚಾರಣೆ ದಿನದವರೆಗೆ ತಡೆ ನೀಡಿ ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿದೆ.
ತಾ.೫ ರಂದು ಮೀಸಲಾತಿ ಆದೇಶ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ 'ಸಾಮಾನ್ಯ ಮಹಿಳೆ' ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 'ಸಾಮಾನ್ಯ' ಮೀಸಲಾತಿ ಪ್ರಕಟಗೊಂಡಿತ್ತು.
ಈ ಮೀಸಲಾತಿ ಆದೇಶದ ವಿರುದ್ಧ ನಗರಸಭಾ ಬಿ.ಜೆ.ಪಿ ಸದಸ್ಯ ಅರುಣ್ ಶೆಟ್ಟಿ ಅವರು ವಕೀಲ ಕೆ.ಎಸ್ ಪೊನ್ನಪ್ಪ ಮುಖಾಂತರ ಉಚ್ಚ ನ್ಯಾಯಾಲಯದಲ್ಲಿ ತಾ.೧೨ ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಸಂಬAಧ ತಾ.೨೦ ರಂದು ನ್ಯಾಯಾಧೀಶ ಅಶೋಕ್ ಎಸ್ ಕಿನಾಗಿ ಅವರ ಸಮ್ಮುಖದಲ್ಲಿ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ವರೆಗೆ ಅಧ್ಯಕ್ಷ ಸ್ಥಾನ ಮೀಸಲಾತಿಗೆ ತಡೆಯಾಜ್ಞೆ ನೀಡಿದ್ದಾರೆ.
೨೦೧೬, ೨೦೧೮ ಹಾಗೂ ೨೦೨೦ ರಲ್ಲೂ ಸರಕಾರವು ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ‘ಸಾಮಾನ್ಯ ಮಹಿಳೆ' ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 'ಸಾಮಾನ್ಯ' ಮೀಸಲಾತಿಯನ್ನೇ ನೀಡುತ್ತಾ ಬಂದಿದೆ.
ಈ ಕಾರಣದಿಂದಾಗಿ ಅರ್ಜಿದಾರರು ಈ ಬಾರಿಯೂ ಅದೇ ಮೀಸಲಾತಿಯನ್ನು ನೀಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು ಅಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ' ಸ್ಥಾನದ ಮೀಸಲಾತಿಗೆ ತಡೆಯಾಜ್ಞೆಯಾಗಿದೆ ಎಂದು ನ್ಯಾಯಾಧೀಶ ಅಶೋಕ್ ಎಸ್ ಕಿನಾಗಿ ಅವರು ತಡೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರುಗಳ ಮೊದಲ ಅವಧಿಯ ಆಡಳಿತ ಪೂರ್ಣಗೊಂಡ ಬಳಿಕ ಜಿಲ್ಲಾಧಿಕಾರಿ ವೆಂಕಟ್ರಾಜ್ ಅವರು ಆಡಳಿತಾಧಿಕಾರಿಯಾಗಿದ್ದಾರೆ.