ಮಡಿಕೇರಿ, ಆ. ೨೧: ಕ್ರೀಡಾ ಜಿಲ್ಲೆ ಎಂದೇ ಪರಿಗಣಿತವಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರಥಮ ಟರ್ಫ್ ಮೈದಾನ ಎಂಬ ಖ್ಯಾತಿಗೆ ಒಳಗಾಗಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯಿ) ಮೈದಾನಕ್ಕೆ ನೀಲಿ ಟರ್ಫ್ ಭಾಗ್ಯ ದೊರೆತಿದೆ. ಹಳೆಯ ಹಸಿರು ಬಣ್ಣದ ಟರ್ಫ್ ಆನ್ನು ತೆಗೆದು ನೀಲಿ ಟರ್ಫ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.

ಒಂದೊಮ್ಮೆ ಜಿಲ್ಲಾ ಕ್ರೀಡಾಂಗಣದ ವಸತಿ ನಿಲಯದಲ್ಲಿ ಕಾರ್ಯಾಚರಿಸುತ್ತಿದ್ದ ಸಾಯಿ ವಸತಿ ಶಾಲೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ರೇಸ್ ಕೋರ್ಸ್ ರಸ್ತೆಗೆ ಸ್ಥಳಾಂತರಗೊAಡ ಬಳಿಕ ಹಾಕಿ ಅಭ್ಯಾಸಕ್ಕಾಗಿ ಹೊಸದಾಗಿ ಟರ್ಫ್ ಅಳವಡಿಸಲಾಯಿತು. ೨೦೦೭ರಲ್ಲಿ ಅಳವಡಿಸಲಾದ ಟರ್ಫ್ಗೆ ಹತ್ತು ವರ್ಷಗಳ ಕಾಲಾವಧಿ ನೀಡಲಾಗಿತ್ತು. ಆದರೂ ೭ ವರ್ಷಗಳ ಕಾಲ ಇದೇ ಟರ್ಫ್ನಲ್ಲಿ ಸಾಯಿ ನಿಲಯದ ಬಾಲಕಿಯರು ಸೇರಿದಂತೆ ಸಾರ್ವಜನಿಕ ಬಾಲಕರು ನಿರಂತರ ಅಭ್ಯಾಸದೊಂದಿಗೆ ಇನ್ನಿತರ ಹಾಕಿ ಕ್ರೀಡಾಕೂಟಗಳು ನಡೆದು ಇದುವರೆಗೆ ತನ್ನ ದೇಹ ಸವೆಸಿತ್ತು. ಇದೀಗ ಹಳೆಯದಾದ, ಅಲ್ಲಲ್ಲಿ ಕಿತ್ತು ಹೋಗಿದ್ದ ಟರ್ಫ್ ಅನ್ನು ಬದಲಾವಣೆ ಮಾಡುವಂತೆ ಸಾಯಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉನ್ನಿರಾಜ್ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಹಾಗಾಗಿ ಮಡಿಕೇರಿಗೆ ನೀಲಿ ಬಣ್ಣದ ಟರ್ಫ್ ಬಂದಿದೆ.

ಬೆAಗಳೂರಿAದ ಶಿಫ್ಟ್

ಬೆಂಗಳೂರಿನ ಸಾಯಿ ಮೈದಾನಕ್ಕೆ ಹೊಸ ಟರ್ಫ್ ಮಂಜೂರಾದ ಹಿನ್ನೆಲೆಯಲ್ಲಿ ಅಲ್ಲಿಗೆ ಅಳವಡಿಸಲಾಗಿದ್ದ ಟರ್ಫ್ ಅನ್ನು ಬೇರೆಡೆಗೆ ವರ್ಗಾಯಿಸುವ ಅವಕಾಶವಿತ್ತು. ಈ ಹಿನ್ನೆಲೆಯಲ್ಲಿ ಮಿನಿ ಉನ್ನಿರಾಜ್ ಅವರ ಪ್ರಯತ್ನದಿಂದಾಗಿ ಅಲ್ಲಿನ ಟರ್ಫ್ ಅನ್ನು ಇಲ್ಲಿಗೆ ಕಳುಹಿಸಿಕೊಡಲಾಗಿದೆ. ಬೆಂಗಳೂರಿನಲ್ಲಿ ಅಳವಡಿಸಿ ಕೇವಲ ನಾಲ್ಕು ವರ್ಷ ಮಾತ್ರ ಆಗಿರುವ ಈ ಟರ್ಫ್ ಹತ್ತು ವರ್ಷಗಳ ಕಾಲ ಬಾಳಿಕೆ ಬರಲಿದೆ.

(ಮೊದಲ ಪುಟದಿಂದ)

ಅಳವಡಿಕೆ ಕಾರ್ಯ

ಈಗಾಗಲೇ ನೀಲಿ ಟರ್ಫ್ ಸಾಯಿ ಮೈದಾನಕ್ಕೆ ಬಂದಿದ್ದು, ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ದೆಹಲಿಯಿಂದ ತಜ್ಞರು ಸೇರಿದಂತೆ ನಾಲ್ವರು ಆಗಮಿಸಿದ್ದು, ಇಲ್ಲಿನ ಸ್ಥಳೀಯ ನಾಲ್ವರು ಕಾರ್ಮಿಕರು ಸೇರಿಕೊಂಡು ಹಳೆಯ ಹಸಿರು ಟರ್ಫ್ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಳೆಯದನ್ನು ತೆರವುಗೊಳಿಸಿದ ಬಳಿಕ ಹಾನಿಯಾಗಿರುವ ಕಡೆಗಳಲ್ಲಿ ಶಾಕ್ ಅಬ್ಸರ್‌ವರ್, ಎಲೆಸ್ಟಿಕ್‌ಗಳನ್ನು ಹಾಕಿ ಹೊಸ ಟರ್ಫ್ ಅಳವಡಿಸಲಾಗುವದು. ಮುಂದಿನ ೫ ದಿನಗಳ ಒಳಗಡೆ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮಿನಿ ಉನ್ನಿರಾಜ್ ಮಾಹಿತಿ ನೀಡಿದರು.

ಹೊರಗಡೆ ೫ ಸೈಡ್ ಮೈದಾನ

ಹಳೆಯ ಹಸಿರು ಟರ್ಫ್ ಬಹುತೇಕ ಹಾಳಾಗಿದ್ದು, ತೆರವುಗೊಳಿಸುವ ಸಂದರ್ಭ ಹರಿದುಹೋಗುತ್ತಿದೆ. ಮಧ್ಯದ ಭಾಗ ಕೊಂಚ ಚೆನ್ನಾಗಿದ್ದು, ಅದನ್ನು ಸುರಕ್ಷಿತವಾಗಿ ತೆರವು ಮಾಡಿ ಮೈದಾನದ ಬದಿಯಲ್ಲಿರುವ ಖಾಲಿ ಜಾಗದಲ್ಲಿ ಅಳವಡಿಸಿ ೫ ಎ ಸೈಡ್ ಮೈದಾನ ಮಾಡುವ ಉದ್ದೇಶ ಹೊಂದಲಾಗಿದೆ. ಸಮತಟ್ಟು ಮಾಡಿ, ಕಾಂಕ್ರಿಟ್ ಹಾಕಿ ಟರ್ಫ್ ಅಳವಡಿಸಬೇಕಿದ್ದು, ಇದಕ್ಕೆ ಸಾಕಷ್ಟು ವೆಚ್ಚ ತಗುಲಲಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತಲ್ಲಿ ಮತ್ತೊಂದು ಉತ್ತಮ ಮೈದಾನ ನಿರ್ಮಾಣವಾಗಲಿದ್ದು, ಕ್ರೀಡಾಪಟುಗಳಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಉನ್ನಿರಾಜ್ ತಿಳಿಸಿದರು.

ಈಗಾಗಲೇ ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೈದಾನ, ಕೂಡಿಗೆ ಕ್ರಿಡಾಶಾಲೆ ಹಾಗೂ ಸೋಮವಾರಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಟರ್ಫ್ ಇದ್ದು, ಇದೀಗ ಮಡಿಕೇರಿಯ ಸಾಯಿ ಮೈದಾನದಲ್ಲಿ ಹೊಸದಾಗಿ ನೀಲಿ ಬಣ್ಣದ ಟರ್ಫ್ ಕಂಗೊಳಿಸಲಿದೆ.

? ಕುಡೆಕಲ್ ಸಂತೋಷ್