ಸೋಮವಾರಪೇಟೆ, ಆ. ೨೧: ಸೋಮವಾರಪೇಟೆ ವಲಯದ ಬೇಳೂರು, ಶಾಂತಳ್ಳಿ ಮತ್ತು ಮಾದಾಪುರ ಶಾಖೆಯ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ನಡೆಸಿದ ೪ ಪ್ರತ್ಯೇಕ ಕಾರ್ಯಾ ಚರಣೆಗಳಲ್ಲಿ ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದ ಬೆಲೆಬಾಳುವ ಮರಗಳು, ಕೃತ್ಯಕ್ಕೆ ಬಳಸಿದ ವಾಹನಗಳ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾದಾಪುರ ಶಾಖೆಗೊಳಪಡುವ ಯಡವಾರೆ ಗ್ರಾಮದ ಖಾಸಗಿ ಜಾಗದಲ್ಲಿ ಇಲಾಖೆಯ ಯಾವುದೇ ಪರವಾನಗಿಯಿಲ್ಲದೆ ಅಕ್ರಮವಾಗಿ ೩ ಹಲಸಿನ ಮರಗಳನ್ನು ಕಡಿದು ನಾಟಾಗಳನ್ನಾಗಿ ಪರಿವರ್ತಿಸಿದ ಆರೋಪದ ಮೇರೆ ಜಾಗದ ಮಾಲೀಕ ಸಿ.ಎಂ. ತಿಮ್ಮಯ್ಯ ಸೇರಿದಂತೆ ಯಡವಾರೆಯ ಅಶೋಕ್ ಪೂಜಾರಿ ಅವರುಗಳನ್ನು ಬಂಧಿಸಿದ್ದಾರೆ. ಅಕ್ರಮವಾಗಿ ಸಾಗಾಟಗೊಳಿಸಲು ಸಿದ್ಧವಾಗಿದ್ದ ೧೭ ನಾಟಾಗಳನ್ನು ವಶಕ್ಕೆ ಪಡೆದಿದ್ದಾರೆ.

೨ನೇ ಪ್ರಕರಣದಲ್ಲಿ ಸೋಮವಾರ ಪೇಟೆ ವಲಯದ ಶಾಂತಳ್ಳಿ ಶಾಖೆಗೆ ಒಳಪಡುವ ಕಲ್ಕಂದೂರು ಗ್ರಾಮದ ಎಂ.ಎನ್. ಚಂದ್ರಶೇಖರ್ ಅವರಿಗೆ ಸೇರಿದ ಜಾಗದಲ್ಲಿದ್ದ ಒಂದು ನಂದಿ ಮರವನ್ನು, ಯಾವುದೇ ಪರವಾನಗಿಯಿಲ್ಲದೆ ಅಕ್ರಮವಾಗಿ ಕಡಿದು ೩೭ ಸೈಜುಗಳನ್ನಾಗಿ ಪರಿವರ್ತಿಸಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆದಿದೆ. ಈ ಸಂದರ್ಭ ನಂದಿ ಮರದ ೩೭ ಸೈಜುಗಳ ಸಹಿತ ಜಾಗದ ಮಾಲೀಕ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆಯಲಾಗಿದೆ.

೩ನೇ ಪ್ರಕರಣದಲ್ಲಿ ಸೋಮವಾರ ಪೇಟೆ ವಲಯದ ಮಾದಾಪುರ ಶಾಖೆಯ ಸೋಮವಾರಪೇಟೆ-ಮಾದಾಪುರ ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಬಿಲ್ವಾರ್ ಮರಗಳನ್ನು ಸಾಗಾಟಗೊಳಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಕಾರ್ಯಾ ಚರಣೆ ನಡೆಸಿದ ಅಧಿಕಾರಿಗಳು, ಈರ್ವರು ಆರೋಪಿಗಳ ಸಹಿತ ಮರ ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಕೋವರ್‌ಕೊಲ್ಲಿ ಜಂಕ್ಷನ್ ಬಳಿ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಬಿಲ್ವಾರ್ ಮರದ ೨೦ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಗಳಾದ ಕರ್ಕಳ್ಳಿ ಗ್ರಾಮದ ಕೆ.ಕೆ. ಇಬ್ರಾಹಿಂ, ಹಾನಗಲ್ಲು ಗ್ರಾಮದ ಹೆಚ್.ಜಿ.ಸುಜಿತ್

(ಮೊದಲ ಪುಟದಿಂದ) ಅವರುಗಳನ್ನು ವಶಕ್ಕೆ ಪಡೆಯಲಾಗಿದೆ.

೪ನೇ ಪ್ರಕರಣದಲ್ಲಿ ಬೇಳೂರು ಶಾಖೆಗೆ ಒಳಪಡುವ ಕರ್ಕಳ್ಳಿ ಬಾಣೆಯ ಬಿ. ರವಿ ಅವರಿಗೆ ಸೇರಿದ ಪೀಠೋಪಕರಣ ಘಟಕದ ಬಳಿ ಆಟೋವೊಂದರಲ್ಲಿ ಅಕ್ರಮವಾಗಿ ಬೀಟೆ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ನಡೆದ ಕಾರ್ಯಾಚರಣೆಯಲ್ಲಿ, ಆಟೋ ಸಹಿತ ಮೂರು ಬೀಟೆ ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳಾದ ಕರ್ಕಳ್ಳಿ ಗ್ರಾಮದ ಪಿ. ಮಣಿಕಂಠ, ಜನತಾ ಕಾಲೋನಿಯ ಎಲ್. ಅಣ್ಣಪ್ಪ, ಕರ್ಕಳ್ಳಿ ಬಾಣೆಯ ಬಿ. ರವಿ ಅವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೋರ್ವ ಆರೋಪಿ ಹಾನಗಲ್ಲು ಬಾಣೆ ಗ್ರಾಮದ ಹೆಚ್.ಈ. ಅರುಣ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಡಿಸಿಎಫ್ ಬಿ. ಭಾಸ್ಕರ್ ಹಾಗೂ ಎಸಿಎಫ್ ಎ.ಎ. ಗೋಪಾಲ್ ಅವರುಗಳ ಮಾರ್ಗದರ್ಶನ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಎನ್. ಶೈಲೇಂದ್ರಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಾದಾಪುರ ಶಾಖೆಯ ಗಸ್ತು ಅರಣ್ಯ ಪಾಲಕ ವೈ.ಎಲ್. ಚಂದ್ರಶೇಖರ್, ಶಾಂತಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಸ್. ಸತೀಶ್, ಅರಣ್ಯ ಪಾಲಕ ವಿಶ್ವ ಕರಿಮಲ್ಲಪ್ಪ, ಬೇಳೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ನಾರಾಯಣ ಮೂಲ್ಯ, ಸಿಬ್ಬಂದಿ ಹೆಚ್.ಕೆ. ವಿಜಯ್ ಅವರುಗಳು ಭಾಗಿಯಾಗಿದ್ದರು.