ಗೋಣಿಕೊಪ್ಪಲು ಆ. ೨೧: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರಾಗಿ ನೇಮಕಗೊಂಡಿರುವ ಗೋಣಿ ಕೊಪ್ಪಲುವಿನ ನಾಯಂದಿರ ಶಿವಾಜಿ ಅವರನ್ನು ಪೊನ್ನಂಪೇಟೆ ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಲವು ವರ್ಷಗಳ ನಂತರ ಸಾಹಿತ್ಯ ಅಕಾಡೆಮಿಯಲ್ಲಿ ಸವಿತಾ ಸಮಾಜಕ್ಕೆ ಆದ್ಯತೆ ನೀಡಿರುವುದನ್ನು ಈ ಸಂದರ್ಭ ಶ್ಲಾಘಿಸಲಾಯಿತು.

ಕೊಡಗಿನ ಮೂಲ ನಿವಾಸಿಗಳಿಗೆ ವಿವಿಧ ಕ್ಷೇತ್ರದಲ್ಲಿ ಆಧ್ಯತೆ ನೀಡುವ ಮೂಲಕ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರÀ ಎ.ಎಸ್.ಪೊನ್ನಣ್ಣನವರು ಸಾಮಾಜಿಕ ನ್ಯಾಯ ನೀಡಿದ್ದಾರೆ ಎಂದು ಪೊನ್ನಂಪೇಟೆ ಸವಿತಾ ಸಮಾಜದ ಅಧ್ಯಕ್ಷ ಪೂಣಚೀರ ಎಸ್.ಮನೋಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಯಂದಿರ ಶಿವಾಜಿ ಇದೇ ಮೊದಲ ಬಾರಿಗೆ ಸಮುದಾಯದ ಐನ್ ಮನೆಗಳ ಅಭಿವೃದ್ದಿಗೆ ಶಾಸಕ ಪೊನ್ನಣ್ಣನವರು ಅನುದಾನ ಬಿಡುಗಡೆಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಐನ್ ಮನೆಗಳ ಅಭಿವೃದ್ದಿಗಾಗಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂಬುದಾಗಿ ತಿಳಿಸಿದರು.

ಸನ್ಮಾನ ಸಂದರ್ಭ ಪೊನ್ನಂಪೇಟೆ ತಾಲೂಕು ಸವಿತಾ ಸಮಾಜದ ಕಾರ್ಯದರ್ಶಿ ಪ್ರವೀಣ್, ಪದಾಧಿಕಾರಿಗಳಾದ ಬೇಬಿ, ದೇವಯ್ಯ, ಮನು, ಕಿಶೋರ್, ಸುತ್ತನ್, ಸುಮನ್, ಸಬಿತ, ಶರಿನ್ ಅವರುಗಳು ಹಾಜರಿದ್ದರು.