ಸಿದ್ದಾಪುರ, ಆ. ೨೦: ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅವರ ಉದ್ದೇಶ ಈಡೇರಲಿದೆ ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್ಎನ್ಡಿಪಿ ಕೊಡಗು ಯೂನಿಯನ್ ವತಿಯಿಂದ ಸಿದ್ದಾಪುರ ಸ್ವರ್ಣಮಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ನಾರಾಯಣ ಗುರುಗಳ ೧೭೦ ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವೀಯ ತತ್ವಗಳು ಜಗತ್ತಿನಲ್ಲಿ ಶ್ರೇಷ್ಠವಾದ ತತ್ವವಾಗಿದ್ದು, ಎಲ್ಲರಿಗೂ ಒಳಿತನ್ನು ಬಯಸಿದ್ದಲ್ಲಿ ಸ್ವಾಸ್ಥö್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಎಸ್ಎನ್ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ ಕೆ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಪ್ಪತ್ತು ವರ್ಷಗಳಿಂದ ಕೊಡಗಿನಲ್ಲಿ ಎಸ್ಎನ್ಡಿಪಿ ತನ್ನ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ೪೦ಕ್ಕೂ ಅಧಿಕ ಸಂಖ್ಯೆಯ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಜಾತಿಗಳ ನಡುವೆ ಸಂಘರ್ಷ ಹೆಚ್ಚಾದಾಗ ಮನುಷ್ಯತ್ವವೇ ಶ್ರೇಷ್ಠ ಎಂಬ ಸಂದೇಶವನ್ನು ಸಾರಿದ ಮಹಾನ್ ಗುರುಗಳ ಆದರ್ಶಗಳನ್ನು ಸಮಾಜದಲ್ಲಿ ಪ್ರತಿಯೊಬ್ಬರೂ ಅಳವಡಿಸಬೇಕೆಂದರು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ೧೨ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ, ವರ್ಣಬೇಧ ವ್ಯವಸ್ಥೆಗಳ ಕುರಿತು ಶ್ರೀ ನಾರಾಯಣ ಗುರುಗಳ ಹೋರಾಟ, ತ್ಯಾಗವನ್ನು ಸ್ಮರಿಸುವುದು ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಶ್ರೀ ನಾರಾಯಣ ಗುರುಗಳ ೧೭೦ ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಎಸ್ಎನ್ಡಿಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ನಂತರ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಹೊತ್ತ ಅಲಂಕೃತ ಮಂಟಪದ ಮೆರವಣಿಗೆಗೆ ಪಿ.ಎ. ಸುಕುಮಾರನ್ ಚಾಲನೆ ನೀಡಿದರು. ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಸ್ಥಾನದಿಂದ ಕೇರಳದ ಚಂಡೆ ವಾದ್ಯ ಹಾಗೂ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟ ಮಹಿಳೆಯರೊಂದಿಗೆ ಅಲಂಕೃತ ಮಂಟಪ ಮೆರವಣಿಗೆ ಸಿದ್ದಾಪುರದ
(ಮೊದಲ ಪುಟದಿಂದ) ಮುಖ್ಯ ರಸ್ತೆಯಲ್ಲಿ ಸಾಗಿ ಸ್ವರ್ಣಮಾಲ ಸಭಾಂಗಣಕ್ಕೆ ತಲುಪಿತು.
ವೇದಿಕೆಯಲ್ಲಿ ಎಸ್ಎನ್ಡಿಪಿ ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ, ಉಪಾಧ್ಯಕ್ಷ ರಾಜನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯನ್, ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಉತ್ತಪ್ಪ, ಪ್ಯಾಡಿಂಗ್ಟನ್ ರೆಸಾರ್ಟ್ ಸಂಸ್ಥೆಯ ವ್ಯವಸ್ಥಾಪಕ ಟಿ.ಎಲ್. ಪ್ರವೀಣ್, ಆಚರಣಾ ಸಮಿತಿ ಅಧ್ಯಕ್ಷ ಪಾಪಯ್ಯ, ಕಾರ್ಯದರ್ಶಿ ಎಂ.ಜಿ. ರಾಜು, ವನಿತಾ ಯೂನಿಯನ್ ಅಧ್ಯಕ್ಷೆ ರೀಶಾ ಸುರೇಂದ್ರ, ಬಿಲ್ಲವ ಸಮಾಜದ ಅಧ್ಯಕ್ಷ ಆನಂದ ಸೇರಿದಂತೆ ಇನ್ನಿತರರು ಹಾಜರಿದ್ದರು.
ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ ಸ್ವಾಗತಿಸಿ, ವಿಶಾಲಾಕ್ಷಿ ಹಾಗೂ ಪ್ರಬಿತ ನಿರೂಪಿಸಿ, ಯೂನಿಯನ್ ಉಪಾಧ್ಯಕ್ಷ ಆರ್ ರಾಜನ್ ವಂದಿಸಿದರು.
ಇದೇ ಸಂದರ್ಭದಲ್ಲಿ ಹತ್ತನೇ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸಮುದಾಯದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್ಎನ್ಡಿಪಿ ಸಂಘಟನೆಯ ಸಮಾಜಮುಖಿ ಕಾರ್ಯಕ್ಕೆ ಬೆಂಬಲ ಸೂಚಿಸಿ ಸಿದ್ದಾಪುರ ಇವಾಲ್ವ್ ಬ್ಯಾಕ್ ರೆಸಾರ್ಟ್ ಸಂಸ್ಥೆಯ ವ್ಯವಸ್ಥಾಪಕರಾದ ಥೋಮಸ್ ಪೌಲ್ ಅವರು ಸಂಘಟನೆಗೆ ಆ್ಯಂಬುಲೆನ್ಸ್ ಖರೀದಿಸಲು ರೂ. ೧೬ ಲಕ್ಷದ ಚೆಕ್ ಹಸ್ತಾಂತರಿಸಿದರು. -ವಾಸು