ವೀರಾಜಪೇಟೆ, ಆ. ೧೮: ಇಲ್ಲಿನ ಪಂಜರ್ಪೇಟೆಯ ದಿ. ಬಿ.ಎಂ. ಮಂಜಪ್ಪ ಪೂಜಾರಿ ಜ್ಞಾಪಕಾರ್ಥ ಅವರ ಪುತ್ರರಾದ ಬಿ.ಎಂ. ಸದಾಶಿವ ಮತ್ತು ಬಿ.ಎಂ. ಕುಮಾರ್ ಅವರು ತಮ್ಮ ಗದ್ದೆಯಲ್ಲಿ ಪ್ರಥಮ ಬಾರಿಗೆ ಕುಟುಂಬ ವರ್ಗ ಮತ್ತು ಸಾರ್ವಜನಿಕರಿಗಾಗಿ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಿದ್ದರು.
ಹಿರಿಯರಾದ ಬಿ.ಆರ್. ರಾಜ ಮತ್ತು ವಕೀಲ ಬಿ.ಎಂ. ಸತೀಶ್ ಕ್ರೀಡಾಕೂಟವನ್ನು ಸಾಂಪ್ರದಾಯಿಕವಾಗಿ ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಕ್ರೀಡಾಕೂಟದಲ್ಲಿ ಮಕ್ಕಳ ವಿಭಾಗ, ಯುವಕ ಮತ್ತು ಯುವತಿಯರ ವಿಭಾಗ, ಮಹಿಳೆಯರ ಮತ್ತು ಪುರುಷರ ವಿಭಾಗ ಎಂದು ಪ್ರತ್ಯೇಕ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ವಿವಿಧ ವಿಭಾಗಗಳಲ್ಲಿ ಹಗ್ಗ ಜಗ್ಗಾಟ, ಲೆಮನ್ ಇನ್ ಸ್ಪೂನ್, ಕೋಲು ಸುತ್ತಿ ಓಟ, ಓಟದ ಸ್ಪರ್ಧೆ, ಕಾಲ್ಚೆಂಡು ಪಂದ್ಯಗಳು ಆಯೋಜನೆಗೊಂಡಿದ್ದವು.
ಶಾAತಪ್ಪ ಪೂಜಾರಿ ಅವರು ಕಾರ್ಯಕ್ರಮದ ಬಗ್ಗೆ ಮಾತನಾಡಿ, ಪ್ರಥಮ ಬಾರಿಗೆ ಕೆಸರುಗೆದ್ದೆ ಕ್ರೀಡಾಕೂಟ ಆಯೋಜನೆ ಮಾಡಲಾಗಿದ್ದು. ನಗರ ವಾಸಿಗಳಿಗೆ ಗ್ರಾಮೀಣ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಡಗು ಜಿಲ್ಲೆ ಕೃಷಿ ಆದಾರಿತ ಜಿಲ್ಲೆ, ಭತ್ತ ಬೆಳೆಯುವ ಗದ್ದೆಗಳನ್ನು ನಾನಾ ಕಾರಣಗಳಿಂದ ಪಾಳುಬಿಡಲಾಗುತ್ತಿದೆ. ಭತ್ತದ ಗದ್ದೆಗಳನ್ನು ಯಾವುದೇ ಕಾರಣಕ್ಕೂ ಪಾಳುಬಿಡದೆ ಬೇಸಾಯ ಮಾಡಬೇಕು. ಸಾಂಪ್ರದಾಯಿಕ ವ್ಯವಸ್ಥೆ ಜೀವಂತವಾಗಿರಿಸಬೇಕು ಎಂದರು. ಆಯೋಜಕರಿಂದ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲಾಯಿತು.ಕಾರ್ಯಕ್ರಮದಲ್ಲಿ ಪಂಜರ್ಪೇಟೆ, ಗಣಪತಿ ಬೀದಿ, ಸುಭಾಷ್ ನಗರದ ನಿವಾಸಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ