ಕಣಿವೆ, ಆ. ೧೭: ಕಳೆದ ೨೦೧೮ ರಿಂದ ೨೦೨೧ ರವರೆಗೂ ನಿರಂತರವಾಗಿ ಮಳೆಗಾಲದ ಆವಧಿಯ ಆಗಸ್ಟ್ ತಿಂಗಳ ಆಶ್ಲೇಷಾ ಮಳೆ ಸುರಿದ ಪರಿಣಾಮ ಅಷ್ಟೂ ವರ್ಷಗಳಲ್ಲೂ ಇದೇ ಆಗಸ್ಟ್ನಲ್ಲಿ ಕಾವೇರಿ ನದಿ ಮೈದುಂಬಿ ಹರಿದಿತ್ತು.

ಆದರೆ ಈ ವರ್ಷ ಆಶ್ಲೇಷಾ ಮಳೆಯ ಕೆಲಸವನ್ನು ಆಶ್ಲೇಷಾ ಮಳೆಗಿಂತಲೂ ಮುನ್ನಾ ಸುರಿದ ಪುನರ್ವಸು ಹಾಗೂ ಪುಷ್ಯೆ ಮಳೆಗಳು ಮಾಡಿ ಮುಗಿಸಿವೆ.

ಅಂದರೆ ಕಳೆದ ೬೦ ದಿನಗಳ ಹಿಂದಷ್ಟೇ (ಮೇ ತಿಂಗಳು) ಇದೇ ಜೀವನದಿ ಕಾವೇರಿ ನೀರಿಲ್ಲದೇ ಪೂರ್ಣ ಪ್ರಮಾಣದಲ್ಲಿ ಬತ್ತಿ ಹೋಗಿತ್ತು. ಆದರೆ ಈ ವರ್ಷದ ಬಸವ ಜಯಂತಿಯ ಬಳಿಕ ಕಾಕತಾಳೀಯ ಎಂಬAತೆ ಆರಿದ್ರಾ, ಪುನರ್ವಸು ಹಾಗೂ ಪುಷ್ಯೆ ಮಳೆಗಳು ನಿರಂತರವಾಗಿ ಸುರಿದ ಪರಿಣಾಮ ಬತ್ತಿದ್ದ ಕಾವೇರಿ ನದಿ ತುಂಬಿ ಹರಿದಿತ್ತು.

ಹಾಗೆಯೇ ನಾಡಿನೆಲ್ಲೆಡೆ ಇರುವ ಕೆರೆ - ಕಟ್ಟೆಗಳು, ಜಲಾಶಯಗಳು ಭರ್ತಿಯಾಗಿದ್ದವು.

ನಂತರ ಇದೇ ತಿಂಗಳ ಆಗಸ್ಟ್ ೩ ರಿಂದ ೧೭ ರತನಕ ಇದ್ದಂತಹ ಆಶ್ಲೇಷಾ ಮಳೆ ಈ ಬಾರಿ ಏನೇನೂ ಸದ್ದು ಮಾಡದ ಕಾರಣ ಇದೀಗ ಕಾವೇರಿ ನದಿಯಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಮಳೆಗಾಲದ ಈ ದಿನಗಳಲ್ಲಿ ತುಂಬಿ ಹರಿಯಬೇಕಿದ್ದ ಕಾವೇರಿ ನದಿ ಇಷ್ಟೊಂದು ಕೆಳ ಮಟ್ಟಕ್ಕೆ ಕುಸಿತ ಕಂಡು ನೀರಸವಾಗಿ ಹರಿಯುತ್ತಿರುವುದು ಒಂದೆಡೆಯಾದರೆ, ಬೇಸಗೆಯ ದಿನಗಳ ರಣಬಿಸಿಲಿನ ಮಾದರಿಯಲ್ಲಿ ಬಿಸಿಲ ಝಳ ಕಳೆದ ನಾಲ್ಕೆöÊದು ದಿನಗಳಿಂದ ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಕಾಡುತ್ತಿದ್ದು ಜನ ಕೇವಲ ನಾಲ್ಕೇ ದಿನಗಳ ಬಿಸಿಲಿಗೆ ಬೆವರ ನೀರಾಗುತ್ತಿದ್ದಾರೆ.

ಅಂದರೆ ಅಷ್ಟರ ಮಟ್ಟಿಗೆ ಉರಿಬಿಸಿಲ ಧಗೆ ಸೆಖೆಯಾಗಿ ಕಾಡುತ್ತಿದ್ದು ಕಾಂಕ್ರೀಟ್ ಮನೆಗಳಲ್ಲಿ ಫ್ಯಾನ್‌ಗಳು ಇಲ್ಲದೇ ಇರಲು ಸಾಧ್ಯವೇ ಇಲ್ಲ ಎಂಬAತಹ ಸ್ಥಿತಿ ನಿರ್ಮಾಣ ವಾಗಿದೆ. ಇದರ ಪರಿಣಾಮ ಕಾವೇರಿ ಹಾಗೂ ಹಾರಂಗಿ ನದಿಗಳಲ್ಲೂ ನೀರಿನ ಹರಿವು ಸಂಪೂರ್ಣವಾಗಿ ಕ್ಷೀಣಿಸಿದೆ.

ಕಳೆದ ಮೂರು ವರ್ಷಗಳ ಹಿಂದಿನ ಆಗಸ್ಟ್ ತಿಂಗಳಲ್ಲಿ ಕಂಡ ಕಾವೇರಿ ನದಿಗೂ ಈ ವರ್ಷದ ಆಗಸ್ಟ್ನಲ್ಲಿ ಕಾಣುತ್ತಿರುವ ಕಾವೇರಿ ನದಿಗೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ.

ಹೀಗೆಯೇ ನಿರಂತರವಾಗಿ ಬಿಸಿಲ ಝಳ ಮುಂದುವರೆದರೆ ಮತ್ತೆ ಅಂತರ್ಜಲದ ಕೊರತೆ ಬಾಧಿಸಲಿದೆ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡುತ್ತಿದೆ.

-ವರದಿ : ಕೆ.ಎಸ್.ಮೂರ್ತಿ