ಮಾನವೀಯತೆ ಮನುಷ್ಯನ ಹುಟ್ಟಿನೊಂದಿಗೆ ಬರುವ ಗುಣ. ಆದರೆ ನಾವು ಬೆಳೆಯುವ ಪರಿಸರ, ಗೆಳೆತನದ ಆಯ್ಕೆ, ಚಂಚಲ ಮನಸ್ಥಿತಿಯಿಂದ ಬದಲಾಗುತ್ತಾ ಹೋಗುತ್ತದೆ. ಮನಸು ಹಣದ ವ್ಯಾಮೋಹಕ್ಕೆ ಬಿದ್ದಾಗ ಮುಗ್ಧತೆ ಮಾಯವಾಗಿ, ಮತ್ಸರ, ದ್ವೇಷ ಮನಸ್ಸಿನಲ್ಲಿ ಮನೆಮಾಡುತ್ತದೆ. ಆಸೆ-ದುರಾಸೆ ಲಾಲಸೀತನ ಮೈದಳೆಯುತ್ತದೆ.
ಶಾಲಾ- ಕಾಲೇಜಿನಲ್ಲಿ ಪುಟ್ಟ ಮೊಗ್ಗಿನ ಮುಗ್ಧ ಮನಸ್ಸುಗಳೆಲ್ಲವೂ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸ್ವಚ್ಛಂದವಾಗಿ ತಮ್ಮದೇ ಲೋಕದಲ್ಲಿ ಸಂತೋಷವಾಗಿ ಇರುತ್ತದೆ. ಹೀಗಿರುವಾಗ ನಿತ್ಯ ಕುಕೃತ್ಯಗಳು ಕಣ್ಣಿಗೆ ಕಾಣುತ್ತಿದ್ದರೆ ಮನಸ್ಸು ಬದಲಾಗುತ್ತಾ ಸಾಗಿ ಮನುಷ್ಯತ್ವವನ್ನು ಕಳೆದುಕೊಳ್ಳುತ್ತದೆ.
ಮಾನವತೆ ಎಂದರೆ ಮನುಷ್ಯನ ಮನಸ್ಥಿತಿ ಆಗಿದೆ. ಜಗತ್ತಿನ ಎಲ್ಲಾ ಜೀವಿಗಳಲ್ಲಿ ಅತಿ ಶ್ರೇಷ್ಠ, ಬುದ್ಧಿವಂತ, ನೆನಪಿನ ಶಕ್ತಿ ಹೊಂದಿರುವ ಜೀವಿ ಎಂದರೆ ಮನುಷ್ಯ. ಆಕಾಶದ ಎತ್ತರಕ್ಕೆ ಹಾರಾಡುವ ಹಕ್ಕಿ, ನೀರಿನಲ್ಲಿರುವ ಮೀನು ಎಲ್ಲವನ್ನು ಅನುಕರಣೆ ಮಾಡಿ ಅದರಂತೆ ಚಲಿಸುವ ಶಕ್ತಿ ಪಡೆದವನು.
ಹಾಗೆಯೇ ಮನುಷ್ಯನ ಮನಸ್ಸು ಕೂಡ ಬೇರೊಂದು ಜೀವಿಯ ಕಷ್ಟಕ್ಕೆ ಸ್ಪಂದಿಸಿ ನೆರವು ನೀಡುವ ಮನುಷ್ಯತ್ವದ ಗುಣವನ್ನೂ ಹೊಂದಿರುತ್ತದೆ. ಕೆಲವೊಮ್ಮೆ ಪ್ರಾಣಿಗಳಿಗೆ ಹಣ್ಣಿನೊಳಗೆ ಬಾಂಬ್ ಅನ್ನು ಇಟ್ಟು ತಿನಿಸುವಂತಹ ಕ್ರೂರ ಮನಸ್ಥಿತಿಯನ್ನು ಹೊಂದಿರುತ್ತದೆ.
ಇದಕ್ಕೆ ಹಿನ್ನೆಲೆಯಾಗಿ .ಡಾ. ಸಿದ್ದಯ್ಯ ಪುರಾಣಿಕ ರವರ
"ನೀ ಬಯಸಿದಂತಾಗು
ಏನಾದರೂ ಸರಿಯೇ -
ಮೊದಲು ಮಾನವನಾಗು"
ಎಂಬ ಮಾತನ್ನು ಇತ್ತೀಚಿನ ದಿವಸಗಳಲ್ಲಿ ನಾವೆಲ್ಲ ಅತ್ಯವಶ್ಯಕವಾಗಿ ಮನನ ಮಾಡಬೇಕಾಗಿರುವ, ಮಾನವತ್ವದ ದಿವ್ಯ ಸಂದೇಶ ಸಾರುವ ಸಾಲುಗಳು ಮಹತ್ವಪೂರ್ಣವಾಗಿವೆ.
ಇದಕ್ಕೆ ಪೂರಕವಾಗಿ ಪ್ರಪಂಚದಾದ್ಯAತದ ಜೀವಗಳನ್ನು ಉಳಿಸುವ ಮತ್ತು ರಕ್ಷಿಸುವ ಪ್ರಯತ್ನವಾಗಿ ಪ್ರತಿ ವರ್ಷ ಆಗಸ್ಟ್ ೧೯ ರಂದು "ವಿಶ್ವ ಮಾನವೀಯ ದಿನ"ವನ್ನು ಆಚರಿಸಲಾಗುತ್ತದೆ. ವಿಪತ್ತು ಪೀಡಿತ ಪ್ರದೇಶಗಳಿಗೆ ಮತ್ತು ಜನರ ಜೀವಗಳನ್ನು ಉಳಿಸಲು ಹಾಗೂ ರಕ್ಷಿಸಲು ಮುಂದೆ ಸಾಗಿ ವಿಶ್ವಾದ್ಯಂತ ಮಾನವತಾವಾದಿಗಳು ಮಾಡಿದ ಕೆಲಸವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಕೆಲವರು ಮನುಷ್ಯತ್ವದಿಂದ ವರ್ತಿಸಿದರೆ ಮತ್ತೆ ಕೆಲವರು ಅಮಾನವೀಯವಾಗಿ ವರ್ತಿಸುವುದನ್ನು ಕಾಣುತ್ತೇವೆ.
ಬಸ್ನಲ್ಲಿ ಪ್ರಯಾಣಿಸುವಾಗ ವಿಶೇಷಚೇತನರಿಗೆ, ವೃದ್ಧರಿಗೆ ಸೀಟು ಬಿಟ್ಟು ಕೊಡಬಹುದು. ಸರ್ಕಾರವು ಮಾನವೀಯ ದೃಷ್ಟಿಯಿಂದ ವಿಶೇಷಚೇತನರಿಗೆ ಕುಟುಂಬದಲ್ಲಿ ದುಡಿಯುವವರನ್ನು ಕಳೆದುಕೊಂಡಾಗ ಅವರ ಆಶ್ರಯದಲ್ಲಿ ಇದ್ದವರಿಗೆ ಹುದ್ದೆ ನೀಡುವ ಅವಕಾಶವೂ ಇದೆ. ಕೆಲವರು ನಾಯಿ ಮರಿಗಳನ್ನು, ಬೆಕ್ಕು ಮರಿಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗುತ್ತಾರೆ. ಇದನ್ನು ಕಂಡ ಕೆಲವರು ತಮ್ಮ ವಾಹನಗಳಲ್ಲಿ ಹೋಗುವಾಗ ವಾಹನ ನಿಲ್ಲಿಸಿ ತಮ್ಮಲ್ಲಿ ತಿನಿಸು ಇಲ್ಲದಿದ್ದರೂ ಖರೀದಿಸಿ ತಂದು ಆ ಮೂಕಪ್ರಾಣಿಗಳಿಗೆ ತಿನ್ನಿಸುವ, ಪಾತ್ರೆಯಲ್ಲಿ ನೀರಿಟ್ಟು ಕುಡಿಸುವಂತಹ ಮಾನವೀಯ ಕೆಲಸಗಳನ್ನು ಮಾಡುತ್ತಾರೆ.
ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸುವುದನ್ನು ಕಾಣುತ್ತೇವೆ. ಶಾಲಾ-ಕಾಲೇಜುಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವುದರ ಮೂಲಕ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತಾರೆ. ಇನ್ನು ಕೆಲವರು ಅನಾಥ ಮಕ್ಕಳಿಗೆ ಮದುವೆ ಮಾಡಿಸುವ ಸಂದರ್ಭ ಧನಸಹಾಯವನ್ನು ಕರಿಮಣಿ ತಾಳಿಗಳನ್ನು ದಾನವಾಗಿ ನೀಡಿ ಮದುವೆಗೆ ಸಹಕರಿಸುವವರು ನಮ್ಮೊಂದಿಗಿದ್ದಾರೆ.
ಇತ್ತೀಚೆಗೆ ಕೇರಳದ ವಯನಾಡಿ ಮುಂಡಕೈನಲ್ಲಿ ನಡೆದ ಪ್ರಕೃತಿ ವಿಕೋಪದ ಭೂ ಕುಸಿದ ಸಂದರ್ಭ ಅನಾಥವಾಗಿರುವ ನವಜಾತ ಶಿಶುಗಳಿಗೆ ಎದೆಹಾಲು ಕುಡಿಸಲು ಭಾವನ ಎಂಬ ಹೆಣ್ಣು ಮಗಳು ಮುಂದೆ ಬಂದು ತ್ಯಾಗಮಯಿ ತಾಯಿಯಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಭಿಕ್ಷುಕರನ್ನು ನೋಡಿ ಮನಸ್ಸು ಕರಗಿದಾಗ ಅವರಿಗೆ ಹಣ ನೀಡದೆ ಆಹಾರವನ್ನು ಮಾನವೀಯತೆಯಿಂದ ನೀಡಬಹುದು.
ನಿಜವಾದ ಶ್ರೀಮಂತಿಕೆ ಎಂದರೆ ಶುಭ್ರ ಮನಸ್ಸಿನಿಂದ ಮಾಡುವ ಮಾನವೀಯತೆಯ ಕೆಲಸಗಳು ಮಾನವೀಯತೆ ಇಲ್ಲದ ಓದು ಪದವಿ ನಿಷ್ಪçಯೋಜಕ. ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಮಾನವೀಯತೆ ಪದವಿ ಕೋರ್ಸ್ಗಳಿದ್ದು, ವಿಪುಲ ಅವಕಾಶಗಳನ್ನೇ ಒದಗಿಸುತ್ತಿದೆ. ನಮಗೆ ಇಷ್ಟವಾದ ಕ್ಷೇತ್ರದಲ್ಲಿ ಇನ್ನಷ್ಟು ಹಿಡಿತ ಸಾಧಿಸಲು ಇಂತಹ ಪದವಿಯಿಂದ ಸಾಧ್ಯವಾಗುತ್ತದೆ. ಈ ಡಿಗ್ರಿಯಿಂದ ಸಾಮಾಜಿಕ ಕಳಕಳಿ ಹೆಚ್ಚಾಗುತ್ತದೆ.
ಮಹಾನ್ ಮಾನವತಾವಾದಿ ಕುವೆಂಪುರವರ "ರಾಮಾಯಣ ದರ್ಶನಂ" ಮಹಾಕಾವ್ಯ ಮನುಷ್ಯನಲ್ಲಿ ದುರಂಹಕಾರ, ಪ್ರತಿಷ್ಠೆ, ದಬ್ಬಾಳಿಕೆಯಂತಹ ಗುಣಗಳನ್ನು ತೊಡೆದು ಹಾಕುವ ಮಾರ್ಗದರ್ಶಿಯಾಗಿದೆ.
ನಮ್ಮಲ್ಲಿ ಮಾನವೀಯತೆ ಹೋಗಿ ಯಂತ್ರದೊAದಿಗೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದೇವೆ. ಹೀಗೂ ಮಾಡಬಹುದು:-
ಮನೆಯ ಮೇಲೆ, ಮುಂದೆ ಕಾಗೆ ಪಕ್ಷಿಗಳಿಗೆ ಆಹಾರ ನೀಡಿ, ನೀರನ್ನು ಇಡುವುದರ ಮೂಲಕ ಅವುಗಳ ಆಹಾರ ಸುರಕ್ಷತೆಯ ಬಗ್ಗೆ ಸಹಾಯ ಮಾಡಬಹುದು. ಮನೆಯ ಬಳಿ ಓಡಾಡುವ ಹಸುಗಳಿಗೆ ಅನ್ನ ಬಸಿದ ಗಂಜಿ ನೀಡಿಬಹುದು. ಬಾಡಿ ಹೋಗುತ್ತಿರುವ ಗಿಡಮರಗಳಿಗೆ ನೀರು ಹಾಕುವುದು ಕೂಡ ಮಾನವೀಯತೆಯ ಒಂದು ಭಾಗವೇ.
ಮನೆಯ ಸುತ್ತಮುತ್ತ ನೀರಿನಲ್ಲಿ ಬಿದ್ದು ಸಾಯುತ್ತಿರುವ ಇರುವೆಗಳ ಗುಂಪುಗಳನ್ನು ಚಿಕ್ಕ ಮಕ್ಕಳಿಗೆ ತೋರಿಸಿ, ರಕ್ಷಿಸಿ ಅವರಿಗೆ ಮಾನವೀಯತೆಯ ಗುಣಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಬಹುದು. ಮನುಷ್ಯರಿಗೆ ಮಾತ್ರ ಮಾನವೀಯತೆ ಇರುವುದೆಂಬ ತಪ್ಪು ತಿಳುವಳಿಕೆ ಬೇಡ.
ವಯನಾಡಿನಲ್ಲಿ ವೃದ್ಧೆಗೂ ಚಿಕ್ಕ ಮಗುವಿಗೂ ಆಶ್ರಯ ನೀಡಿದ ಆನೆಯ ಕಣ್ಣೀರಿನ ಮಾನವೀಯ ಕಥೆಯನ್ನು ನೋಡಿದ್ದೇವೆ. ನಾಯಿ ಮತ್ತು ಬೆಕ್ಕು ಶತ್ರುಗಳೆಂದು ಕಥೆಗಳಲ್ಲಿ ಓದಿದ್ದೇವೆ. ಆದರೆ ಎಷ್ಟು ಮನೆಗಳಲ್ಲಿ ಒಂದೇ ತಟ್ಟೆಯಲ್ಲಿ ಆಹಾರ ಸೇವನೆ ಮಾಡಿಕೊಂಡು ಮನುಷ್ಯನಿಗಿಂತ ಮೇಲಾಗಿ ಬದುಕುತ್ತಿರುವ ಮನಸುಗಳು ಇವೆ.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದಾಗ ಅವರು ಸಾಕಿದ್ದ ನಾಯಿಗಳು ಕಣ್ಣೀರು ಸುರಿಸಿ ಕಾಣೆಯಾ ದದ್ದು ಪ್ರಾಣಿಗಳಿಗೂ ಮನಸ್ಸು ಇದೆ ಎಂಬುದನ್ನು ಸಾಬೀತು ಮಾಡಿತು.
ಕೊಲ್ಕತ್ತಾದಲ್ಲಿ ಜೀವಉಳಿಸುವ ವೈದ್ಯಯನ್ನೇ ಕೊಲ್ಲುವಂತಹ ಅಮಾನವೀಯ ಘಟನೆಗಳು ಸಂಭವಿಸುತ್ತಿರುವುದು ದುಃಖದ ವಿಷಯ. ಮರ್ಯಾದ ಹತ್ಯೆಗಳು ನಡೆದು ಸಮಾಜದಲ್ಲಿ ಭಯವನ್ನುಂಟು ಮಾಡುವ ಘಟನೆ ಮನುಷ್ಯನ ವಿಕೃತ ಮನಸ್ಸನ್ನು ತೋರಿಸಿಕೊಡುತ್ತದೆ.
ನಿರ್ದೇಶಕರಾದ ರಿಷಿರವರು ರಚಿಸಿದ "ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ" ಕವನವನ್ನು ಸದಾ ನೆನಪಿಸಿಕೊಳ್ಳುತ್ತಿರಬೇಕು.
ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಶಿವರಾಮ ಕಾರಂತರು ಹೇಳುವಂತೆ "ಈ ಜಗತ್ತಿನಲ್ಲಿ ಹುಟ್ಟಿದ ಎಲ್ಲರಿಗೂ ಹುಟ್ಟಿದಂದಿನಿAದ ಸಾಯುವ ಅವಧಿಯ ತನಕ ಬದುಕುವ ಹಕ್ಕು ಇದ್ದೇ ಇದೆ. ನೋಯಿಸುವ, ಕೊಲ್ಲುವ ಹಕ್ಕು ಇಲ್ಲ. ನೀನಿರುವ ಜಗತ್ತಿನಲ್ಲಿ ಇತರ ಅಸಂಖ್ಯಾತ ಜೀವಕೋಟಿಗಳು ಇರುವುದರಿಂದ ಆ ಜೀವಕೋಟಿಯ ಜೀವನಕ್ಕೂ ನಿಮಗೂ ಸಂಬAಧ ಇರುವುದರಿಂದ ಅಂಥ ಸಂಬAಧ ಏನೆಂದು ತಿಳಿಯದೆ - ನಿಮ್ಮ ಬದುಕು ಸುಗಮವಾಗಲಾರದು ಎಂದಿದ್ದಾರೆ.
ಇತರ ಅಸಂಖ್ಯಾತ ಕೋಟಿ ಜೀವಗಳು ಜೀವಕೋಟಿಯೊಂದಿಗೆ ಜೀವನವನ್ನು ನಾವು ನಡೆಸಬೇಕಾಗಿರುವುದರಿಂದ ಇತರ ಜೀವಿಗಳನ್ನು ಏನೆಂದು ತಿಳಿಯದೆ ನಮ್ಮ ಬದುಕು ಸುಗಮ ಆಗಲಾರದು ಎಂದಿದ್ದಾರೆ.
ಕೊನೆಹನಿ:-
ಕೆಲವೊಮ್ಮೆ ಮನುಷ್ಯ ಮನುಷ್ಯತ್ವವನ್ನು ಮೆರೆಯುತ್ತಾನೆ, ಮರೆಯುತ್ತಾನೆ ಕೂಡ.
-ಎಸ್.ಎಂ. ರಜನಿ, ಸಹಾಯಕ ಪ್ರಾಧ್ಯಾಪಕಿ,
ಕಾವೇರಿ ಕಾಲೇಜು, ಗೋಣಿಕೊಪ್ಪಲು.