ಭಾಗಮಂಡಲ, ಆ. ೧೮: ಸಮೀಪದ ಚೇರಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಒಂಟಿ ಆನೆಯೊಂದು ಸಂಚರಿಸುತ್ತಿದ್ದು, ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಹಲವು ಕೃಷಿಕರ ತೋಟಗಳು ಆನೆ ದಾಳಿಯಿಂದ ಧ್ವಂಸವಾಗಿವೆ. ಚೇರಂಗಾಲ ಗ್ರಾಮದ ಕೋಡಿಮನೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಂದ ಈ ಆನೆ ಬೀಡು ಬಿಟ್ಟಿದ್ದು, ಸಂಜೆಯ ವೇಳೆಗೆ ತೋಟದಲ್ಲಿ ಅಡ್ಡಾಡಿ ಕಾಫಿ ಗಿಡಗಳನ್ನು, ಬಾಳೆ ಗಿಡಗಳನ್ನು ನಾಶಪಡಿಸಿದೆ. ಇಲ್ಲಿನ ಕುದನೆ ಕೋಡಿ ಕುಂಜಣ್ಣ ಎಂಬವರು ಭತ್ತದ ನಾಟಿಗೆ ಎಂದು ಸಿದ್ಧಪಡಿಸಿದ್ದ ಸಸಿ ಮಡಿಗಳನ್ನು ಆನೆ ತುಳಿದು ನಾಶಪಡಿಸಿದೆ. ಬಹುತೇಕ ಸಸಿ ಮಡಿಗಳು ನಾಶವಾಗಿರುವುದರಿಂದ ಈ ವರ್ಷ ನಾಟಿ ಕಾರ್ಯವನ್ನು ಕೈ ಬಿಟ್ಟಿದ್ದಾರೆ. ಸ್ಥಳೀಯರಾದ ಬಾಲಕೃಷ್ಣ ಎಂಬವರಿಗೆ ಸೇರಿದ ಅಡಿಕೆ ಗಿಡಗಳು ಹಾಗೂ ಬಾಳೆ ಗಿಡಗಳು ನಾಶವಾಗಿವೆ. ಕೋಡಿಮನೆ ನಂದ ಅವರ ಮನೆಯ ಮುಂಭಾಗಕ್ಕೂ ಆನೆ ಬಂದಿದೆ.
ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂಟಿ ಸಲಗದ ಬಗ್ಗೆ ಮಾಹಿತಿ ನೀಡಿದರು ಎರಡು ದಿನಗಳಿಂದ ಅವರು ಇತ್ತ ತಲೆಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಂಟಿ ಸಲಗದಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ತೊಂದರೆ ಆಗಿದೆ. ಕಾಡಾನೆ ಹಾವಳಿಯಿಂದ ಭಯಭೀತರಾಗಿದ್ದು ಜನರು ಸಂಚರಿಸಲು ಹೆದರುವಂತಾಗಿದೆ. -ಸುನಿಲ್