ವೀರಾಜಪೇಟೆ, ಆ. ೧೭: ಒಣಮೀನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಸಾರ್ವಜನಿಕರು ಥಳಿಸಿ ನಂತರ ಬುದ್ಧಿವಾದ ಹೇಳಿ ಕಳುಹಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಮಾರುಕಟ್ಟೆಯಲ್ಲಿರುವ ಒಣಮೀನು ಮಳಿಗೆಗೆ ನುಗ್ಗಿ ಕಳ್ಳತನ ನಡೆಸಿ ಪರಾರಿಯಾಗಲು ಯತ್ನಿಸುತ್ತಿದ್ದ ತೋಮರ ಗ್ರಾಮದ ಸುರೇಶ್ ಸಾರ್ವಜನಿಕರಿಂದ ಥಳಿತಕ್ಕೊಳಗಾದ ವ್ಯಕ್ತಿ.
ಹಲವು ದಿನಗಳಿಂದ ವೀರಾಜಪೇಟೆ ತರಕಾರಿ ಮಾರುಕಟ್ಟೆ ಯಲ್ಲಿ ತರಕಾರಿ ಚೀಲಗಳು ಕಳವಾಗುತ್ತಿದ್ದವು. ೧೫ ದಿನಗಳ ಹಿಂದೆ ೫೦ ಕೆ.ಜಿ. ಬೀಟ್ರೂಟ್, ತಿಂಗಳ ಹಿಂದೆ ೨೦ ಕೆ.ಜಿ. ತೂಕದ ಬೀನ್ಸ್, ೧೦ ದಿನಗಳ ಹಿಂದೆ ೧೦ ಕೆ.ಜಿ. ತೂಕದ ಹಾಗಲ ಕಾಯಿ ಇರುವ ಚೀಲ ಕಳ್ಳತನವಾಗಿತ್ತು. ನಿರಂತರ ಕಳ್ಳತನದಿಂದ ಮಾರುಕಟ್ಟೆಯ ವರ್ತಕರು ಕಂಗಾಲಾಗಿ ಎಚ್ಚರಿಕೆ ವಹಿಸಿದ್ದರು.
ತರಕಾರಿ ಮಾರುಕಟ್ಟೆಯಲ್ಲಿಯೇ ಒಣ ಮೀನು ಮಾರುಕಟ್ಟೆ ಇದ್ದು, ಮುಂಜಾನೆ ಸುಮಾರು ೫ ಗಂಟೆಯ ಸಮಯದಲ್ಲಿ ಯಾರು ಇಲ್ಲದಿರು ವುದನ್ನು ಗಮನಿಸಿ ಒಣಮೀನುಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ. ಮುಂಜಾನೆ ಮಾರುಕಟ್ಟೆಯಿಂದ ವ್ಯಕ್ತಿಯೋರ್ವ ಸಂಶಯಾಸ್ಪದವಾಗಿ ತೆರಳುತ್ತಿರುವುದನ್ನು ಸ್ಥಳೀಯ ರೊಬ್ಬರು ಗಮನಿಸಿ ಮಾಹಿತಿ ಸ್ನೇಹಿತರಿಗೆ ತಿಳಿಸಿ ಆತನನ್ನು ಹಿಂಬಾಲಿಸಿಕೊAಡು ತೆರಳಿ ಮೂರ್ನಾಡು ರಸ್ತೆಯ ತಿರುವಿನಲ್ಲಿ ಕಳ್ಳನನ್ನು ಮಾಲು ಸಹಿತ ಹಿಡಿದಿದ್ದಾರೆ. ವ್ಯಕ್ತಿಯನ್ನು ಮಾರುಕಟ್ಟೆಗೆ ಕರೆ ತಂದು ವಿಚಾರಣೆ ಮಾಡಿ ಥಳಿಸಿದ ಸಂದರ್ಭ ಸಮೀರ್ ಎಂಬವರ ಒಣ ಮೀನು ಮಳಿಗೆ ಯಿಂದ ತೆರಂಡಿ ಮೀನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ತೆರಂಡಿ ಮೀನು ಕೆ.ಜಿ. ಒಂದಕ್ಕೆ ೪೫೦ ರೂ ಬೆಲೆಯಾಗಿದ್ದು. ಸುಮಾರು ೧೦ ಕೆ.ಜಿ. ಮೀನು ಕಳ್ಳತನ ಮಾಡಿದ್ದ. ನಂತರ ಆತನಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.
-ಕಿಶೋರ್ ಕುಮಾರ್ ಶೆಟ್ಟಿ