*ಗೋಣಿಕೊಪ್ಪ, ಆ. ೧೮: ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಪೊನ್ನಂಪೇಟೆ ತಾಲೂಕು ಮಟ್ಟದ ೩ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ತಾ. ೨೫ ರಂದು ನಿಟ್ಟೂರು ಗ್ರಾಮದ ಡಾ. ಮಾಪಂಗಡ ಪ್ರತಾಪ್ ಅವರ ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ತಿಳಿಸಿದ್ದಾರೆ.

ಮೂರು ವಿಭಾಗದಲ್ಲಿ ಕ್ರೀಡೆ ನಡೆಯಲಿದೆ. ಪುರುಷರಿಗೆ ವಾಲಿಬಾಲ್, ಮಹಿಳೆ ಮತ್ತು ಪುರುಷರಿಗೆ ಹಗ್ಗಜಗ್ಗಾಟ, ಮಕ್ಕಳಿಗೆ ೧೪ ವರ್ಷ, ೧೦ ವರ್ಷ ಮಕ್ಕಳಿಗೆ ಹಗ್ಗಜಗ್ಗಾಟ ನಡೆಯಲಿದೆ. ಎಲ್ಲರಿಗೂ ಓಟ ಸ್ಪರ್ಧೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಥಮ ೧೫ ಸಾವಿರ, ದ್ವಿತೀಯ ೧೦ ಸಾವಿರ, ೩ ಮತ್ತು ೪ ಸ್ಥಾನ ಪಡೆದವರಿಗೆ ತಲಾ ೫ ಸಾವಿರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಮಕ್ಕಳು ಹಗ್ಗಜಗ್ಗಾಟದಲ್ಲಿ ಪಾಲ್ಗೊಳ್ಳಲು ಗದ್ದೆಗೆ ಆಗಮಿಸಬೇಕಿದೆ. ಮಕ್ಕಳನ್ನು ನಾವೇ ತಂಡವಾಗಿ ರಚಿಸಲಾಗುವುದು. ಎಲ್ಲ ಸ್ಪರ್ಧಿಗಳು ಕಡ್ಡಾಯವಾಗಿ ಆಧಾರ್ ನಕಲು ಪ್ರತಿ ತರಬೇಕು ಎಂದು ತಿಳಿಸಿದರು.

ಸಂಸ್ಥೆಗೆ ೩೫ ವರ್ಷ ಆಗಿದೆ. ಉತ್ತಮ ಕಾರ್ಯ ನಡೆಯುತ್ತಿದೆ. ಬಾಳೆಲೆ ಗ್ರಾಮದಲ್ಲಿ ಮನೋರಂಜನೆಗೆ ಕೆಸರುಗದ್ದೆ ಕ್ರೀಡಾಕೂಟ ಅವಕಾಶ ದೊರೆತಿದೆ. ಕೃಷಿ ಗದ್ದೆ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ತೀರಾ ಕಡಿಮೆ ಇದೆ. ರೈತರು ಒಂದು ವರ್ಷ ಕೃಷಿ ಚಟುವಟಿಕೆಗೆ ಸ್ಥಗಿತಗೊಳಿಸಿದರೆ ಆಹಾರ ಉತ್ಪಾದನೆ ಸ್ಥಗಿತಗೊಳ್ಳುವ ಆತಂಕವಿದೆ. ಈ ನಿಟ್ಟಿನಲ್ಲಿ ಕೃಷಿಗೆ ಪ್ರೋತ್ಸಾಹ ನೀಡಲು ಕೆಸರುಗದ್ದೆ ಕ್ರೀಡೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಪುಟ್ಟು ಮಂದಣ್ಣ, ಕ್ರೀಡಾ ಕಾರ್ಯದರ್ಶಿ ಕಾಡ್ಯಮಾಡ ಸುಬ್ಬಯ್ಯ, ಖಜಾಂಚಿ ಎ.ಕೆ. ಚಂದ್ರಶೇಖರ್, ನಿರ್ದೇಶಕ ಅಳಮೇಂಗಡ ದಿಲ್ಲು ತಿಮ್ಮಯ್ಯ ಇದ್ದರು.