ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ

ಬೆಂಗಳೂರು, ಆ. ೧೮: ಕೋಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತರಬೇತಿ ನಿರತ ವಿದ್ಯಾರ್ಥಿನಿಯ ಅÀತ್ಯಾಚಾರ ಪ್ರಕರಣ ಸುದ್ದಿ ಬಿಸಿಯಾಗಿರುವಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದೆ. ವಾರಾಂತ್ಯ ಸ್ನೇಹಿತರೊಂದಿಗೆ ಕೋರಮಂಗಲದ ಪಬ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ ಯುವತಿಯನ್ನು ಬೈಕ್‌ನಲ್ಲಿ ಡ್ರಾಪ್ ಕೊಡಲು ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ. ಸಂತ್ರಸ್ತ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿ ಅಭ್ಯಾಸ ಮಾಡುತ್ತಿದ್ದಳು. ವಿದ್ಯಾರ್ಥಿನಿ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯಲ್ಲಿ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆ ಸುತ್ತ ತೀವ್ರ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಘಟನೆ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಎಸಿಪಿ ರಮಣ್ ಗುಪ್ತಾ ವಿವರಿಸಿದ್ದಾರೆ. ಕಳೆದ ಮಧ್ಯರಾತ್ರಿ ೧ ರಿಂದ ೧.೩೦ರ ಮಧ್ಯ ಸಮಯದಲ್ಲಿ ಯುವತಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬೇರೆಡೆಗೆ ಕರೆದುಕೊಂಡು ಹೋಗಿ ಪೈಶಾಚಿಕ ಕೃತ್ಯ ನಡೆಸಿದ್ದಾನೆ. ನಾವು ಅತ್ಯಾಚಾರ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದಿದ್ದಾರೆ. ಅನ್ಯ ರಾಜ್ಯದ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತರ ಜೊತೆ ಕೋರಮಂಗಲದ ಪಬ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದರು. ಪಾರ್ಟಿ ಮುಗಿಸಿ ಕೊಂಡು ದ್ವಿಚಕ್ರ ವಾಹನದಲ್ಲಿ ಬಂದ ವಿದ್ಯಾರ್ಥಿನಿ ನಂತರ ಮತ್ತೊಂದು ಬೈಕ್‌ನಲ್ಲಿ ಹತ್ತಿ ಹೋಗಿದ್ದು, ಆತನೇ ಅತ್ಯಾಚಾರ ನಡೆಸಿರುವ ಶಂಕೆಯಿದ್ದು ಸ್ಥಳಕ್ಕೆ ಭೇಟಿ ನೀಡಿ ಯುವತಿಯ ಮನೆಯವರ ಜೊತೆ ಮಾತನಾಡಿ ೫ ತಂಡಗಳನ್ನು ರಚಿಸಿ ತನಿಖೆ ಮಾಡುತ್ತಿದ್ದೇವೆ. ಅತಿ ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸವಿದೆ ಎಂದರು.

ಆರು ತಿಂಗಳಲ್ಲಿ ಬಿಜೆಪಿಯ ಅರ್ಧದಷ್ಟು ನಾಯಕರು ಜೈಲಿಗೆ - ಪ್ರಿಯಾಂಗ್ ಖರ್ಗೆ

ಬೆಂಗಳೂರು, ಆ. ೧೮: ಇನ್ನು ಆರು ತಿಂಗಳಲ್ಲಿ ಬಿಜೆಪಿಯ ಅರ್ಧದಷ್ಟು ನಾಯಕರು ಜೈಲಿನಲ್ಲಿರುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಭವಿಷ್ಯ ನುಡಿದಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲಿದ್ದು, ಮುಂದಿನ ಆರು ತಿಂಗಳಲ್ಲಿ ರಾಜ್ಯದ ಅರ್ಧದಷ್ಟು ಬಿಜೆಪಿ ನಾಯಕರು ಜೈಲಿನಲ್ಲಿರುತ್ತಾರೆ ಅಥವಾ ಜಾಮೀನಿಗಾಗಿ ಓಡುತ್ತಾರೆ ಎಂದರು. ಬಿಜೆಪಿ ನಾಯಕರ ಮೇಲೆ ೩೫ಕ್ಕೂ ಹೆಚ್ಚು ಪ್ರಕರಣಗಳಿದ್ದು, ಮೂರ್ನಾಲ್ಕು ಪ್ರಕರಣಗಳಲ್ಲಿ ಮಧ್ಯಂತರ ವರದಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆಯ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಪ್ರಕರಣಗಳನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದೇವೆ. ಈ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಹಿಂದಿನ ಸರ್ಕಾರದಲ್ಲಿ ತೀವ್ರ ಭ್ರಷ್ಟಾಚಾರ ಇತ್ತು. ಅದರ ಮೇಲೆ ಕೆಲಸ ಮಾಡುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಅರ್ಧದಷ್ಟು ಬಿಜೆಪಿ ನಾಯಕರು ಜಾಮೀನಿಗಾಗಿ ಓಡುತ್ತಾರೆ ಅಥವಾ ಜೈಲಿನಲ್ಲಿರುತ್ತಾರೆ ಎಂದು ಅವರು ಹೇಳಿದರು.

ಮೋಹನ್‌ಲಾಲ್ ಆರೋಗ್ಯದಲ್ಲಿ ಏರುಪೇರು

ಕೊಚ್ಚಿ, ಆ. ೧೮: ಜ್ವರ ಮತ್ತು ಉಸಿರಾಟದ ತೊಂದರೆಯಿAದ ಬಳಲುತ್ತಿರುವ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ೬೪ ವರ್ಷದ ಮೋಹನ್ ಲಾಲ್ ತೀವ್ರ ಜ್ವರ, ಉಸಿರಾಟದ ತೊಂದರೆ ಹಾಗೂ ಸ್ನಾಯು ನೋವು ಹೊಂದಿರುವುದಾಗಿ ಕೊಚ್ಚಿಯ ಅಮೃತಾ ಆಸ್ಪತ್ರೆ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಅವರಿಗೆ ವೈರಲ್ ಉಸಿರಾಟದ ಸೋಂಕಿರುವ ಶಂಕೆ ವ್ಯಕ್ತವಾಗಿದೆ. ಐದು ದಿನಗಳ ವಿಶ್ರಾಂತಿಯೊAದಿಗೆ ಔಷಧಿಗಳನ್ನು ತೆಗೆದುಕೊಳ್ಳುವಂತೆ ಹಾಗೂ ಜನರಿರುವ ಕಡೆ ಸೇರದಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಜಾತಿನಿಂದನೆ - ಕೊಲೆಯಲ್ಲಿ ಅಂತ್ಯ

ಕೊಪ್ಪಳ, ಆ. ೧೮: ಕೂದಲ ಕಟ್ಟಿಂಗ್‌ಗಾಗಿ ನಡೆದ ವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಸಂಗನಾಳ ಗ್ರಾಮದ ೪೬ ವರ್ಷದ ಮುತ್ತಣ್ಣ ಹಡಪದ ಎಂಬ ವ್ಯಕ್ತಿಯ ಕಟ್ಟಿಂಗ್ ಶಾಪ್‌ಗೆ ದಲಿತ ಸಮುದಾಯದ ೨೬ ವರ್ಷದ ಯಮನೂರಸ್ವಾಮಿ ಎನ್ನುವ ಯುವಕ ಕ್ಷೌರ ಮಾಡಿಸಲು ಹೋಗಿದ್ದಾನೆ. ನೀನು ದಲಿತ ಕಟ್ಟಿಂಗ್ ಮಾಡುವುದಿಲ್ಲ ಎಂದು ಮುತ್ತಣ್ಣ ಹೇಳಿದ್ದಾನೆ. ಈ ವಿಷಯ ವಾಗ್ವಾದಕ್ಕೆ ತಿರುಗಿ ನಂತರ ಕತ್ತಿಯಿಂದ ಮುತ್ತಣ್ಣ ಹಡಪದ ಯಮನೂರ ಸ್ವಾಮಿಯನ್ನು ಚುಚ್ಚಿ ಕೊಲೆಗೈದಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ವೈದ್ಯೆಯ ಮೇಲೆ ಹಲ್ಲೆ - ಇಬ್ಬರ ಬಂಧನ

ಮುAಬೈ, ಆ. ೧೮: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ ಮಹಿಳಾ ವೈದ್ಯೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ವತ್ರೆಯಲ್ಲಿನ ಕ್ಯಾಶುಲಿಟಿ ವಾರ್ಡ್ನಲ್ಲಿ ವ್ಯಕ್ತಿಯೊಬ್ಬರ ಕಿವಿಯಿಂದ ಸುರಿಯುತ್ತಿದ್ದ ರಕ್ತವನ್ನು ಸ್ವಚ್ಚಗೊಳಿಸುತ್ತಿದ್ದ ಡಾಕ್ಟರ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ವ್ಯಕ್ತಿ ಕಿರುಚಿದ್ದು ವಾಗ್ವಾದಕ್ಕೆ ಕಾರಣವಾಗಿದೆ. ರೋಗಿಯೊಂದಿಗೆ ಬಂದಿದ್ದವರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಮಹಿಳಾ ವೈದ್ಯರ ಮೇಲೆ ಹಲ್ಲೆ ನಡೆಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತ - ೧೦ ಮಂದಿ ಸಾವು, ೨೦ಕ್ಕೂ ಹೆಚ್ಚು ಮಂದಿಗೆ ಗಾಯ

ಉತ್ತರ ಪ್ರದೇಶ, ಆ. ೧೮: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಸ್ ಮತ್ತು ಟೆಂಪೋ ಡಿಕ್ಕಿ ಹೊಡೆದು ಹತ್ತು ಜನರು ಮೃತಪಟ್ಟು ೨೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಟೆಂಪೋದಲ್ಲಿ ೨೫ ಜನರು ಪ್ರಯಾಣಿಸುತ್ತಿದ್ದರು. ಖಾಸಗಿ ಬಸ್ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುವಾಗ ಟೆಂಪೋಗೆ ಡಿಕ್ಕಿ ಹೊಡೆದು ಟೆಂಪೋ ಪಲ್ಟಿಯಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅಪಘಾತದಲ್ಲಿ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗವೂ ಜಖಂಗೊAಡಿದೆ. ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ರಸ್ತೆ ತಡೆ ನಡೆಸಿದರು.

ಬಿ.ಎಸ್.ವೈ. ಮನೆಗೆ ಮುತ್ತಿಗೆ ಯತ್ನ

ಶಿಕಾರಿಪುರ, ಆ. ೧೮: ಮುಡಾ ಹಗರಣ ಸಂಬAಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು, ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಾ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಅವರನ್ನೆಲ್ಲ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ನಂತರ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿರುವ ಅವರ ಮಗ ಬಿ.ವೈ ವಿಜಯೇಂದ್ರ ವಿರುದ್ಧ ಧಿಕ್ಕಾರ ಕೂಗುತ್ತಾ, ಯಡಿಯೂರಪ್ಪ ಮನೆಗೆ ನುಗ್ಗಲು ಪ್ರಯತ್ನಿಸಿದವರನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಬಿಡುಗಡೆಗೊಳಿಸಿದರು

ಸ್ವಯಂಪ್ರೇರಿತವಾಗಿ ವಿಚಾರಣೆಗೆ ಸುಪ್ರೀಂಕೋರ್ಟ್ ತೀರ್ಮಾನ

ನವದೆಹಲಿ, ಆ. ೧೮: ಕೋಲ್ಕತ್ತದ ಸರ್ಕಾರಿ ಆರ್.ಜಿ. ಕರ್ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಮಂಗಳವಾರ ವಿಚಾರಣೆ ನಡೆಸಲಿದೆ ಎಂದು ಸುದ್ದಿಸಂಸ್ಥೆ `ಎಎನ್‌ಐ' ವರದಿ ಮಾಡಿದೆ.