ಚೆಯ್ಯಂಡಾಣೆ, ಆ. ೧೩: ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಾಪಳರ ಕಾಲೋನಿಯಿಂದ ಅಡಿಯರ ಕಾಲೋನಿಗೆ ತೆರಳುವ ಅಂದಾಜು ೪ ಕಿಲೋಮೀಟರ್ ರಸ್ತೆಯಲ್ಲಿ ನಡೆದಾಡಲು ಖಾಸಗಿ ರೆಸಾರ್ಟ್ನವರು ತಡೆಯೊಡ್ಡುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟಿಸಲು ಮುಂದಾದ ಘಟನೆ ಯವಕಪಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಯವಕಪಾಡಿ ಗ್ರಾಮದ ಕಾಪಳರ ಕಾಲೋನಿಯಿಂದ ಅಡಿಯರ ಕಾಲೋನಿಗೆ ತೆರಳುವ ರಸ್ತೆ ಸಾರ್ವಜನಿಕ ಮುಕ್ತವಾಗಿತ್ತು. ಕಳೆದ ಕೆಲವು ವರ್ಷಗಳಿಂದ ರೆಸಾರ್ಟ್ ಬಂದ ನಂತರ ನಮಗೆ ಬೇರೆ ರಸ್ತೆ ಮಾರ್ಗ ನೀಡಿದ್ದು ಅದನ್ನು ಕೂಡ ತಡೆಹಿಡಿದು ನಡೆದಾಡಲು ಬಿಡುತ್ತಿಲ್ಲ ಎಂದು ಇಲ್ಲಿನ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರೆಸಾರ್ಟ್ನವರು ಬದಲಿ ರಸ್ತೆ ನೀಡಿದ್ದಾರೆ; ಆದರೆ ಆ ರಸ್ತೆಯಲ್ಲಿ ತÀಮಗೆ ತೆರಳಲು ಸಾಧ್ಯವಿಲ್ಲ. ಅಪ್ಪಣೆ ಇಲ್ಲದೆ ಪ್ರವೇಶ ಇಲ್ಲ ಎಂದು ನಾಮಫಲಕ ಕೂಡ ಹಾಕಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ಇಂದು ಕಂದಾಯ ಪರಿವೀಕ್ಷಕ ರವಿಕುಮಾರ್ ಸ್ಥಳಕ್ಕೆ ಬಂದು ಸರ್ವೇ ಮಾಡಿ ಯಾವ ಮಾರ್ಗದಲ್ಲಿ ರಸ್ತೆ ಇದೆ ಅದನ್ನು ಅವರಿಗೆ ನೀಡಲಾಗುವುದು ಎಂದರು.

‘ಶಕ್ತಿ’ಯೊAದಿಗೆ ಮಾತನಾಡಿದ ಗ್ರಾಮಸ್ಥ ಸನ್ನಿ ಸೊಮ್ಮಣ್ಣ, ತಾ. ೧೫ ರ ಸ್ವಾತಂತ್ರö್ಯ ದಿನಾಚರಣೆ ಮುಂಚಿತ ವಾಗಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಎದುರುಗಡೆ ಅಂದು ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು. ಗ್ರಾಮಸ್ಥ ಕಾಪಳರ ತಮ್ಮಯ್ಯ ಮಾತನಾಡಿ, ಕೂಡಲೇ ನಕಾಶೆಯಲ್ಲಿ ಇರುವ ರಸ್ತೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಲಿಯಂಡ ಸಂಪನ್ ಅಯ್ಯಪ್ಪ ಮಾತನಾಡಿ, ಆದಷ್ಟು ಬೇಗ ಸರ್ವೇ ಕಾರ್ಯ ಮುಗಿಸಿ ಜಾಗ ಗುರುತಿಸಿಕೊಟ್ಟರೆ ಕೂಡಲೇ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ತೆರವುಗೊಳಿಸಲಾಗುವುದು ಎಂದರು.

(ಮೊದಲ ಪುಟದಿಂದ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಮಾತನಾಡಿ, ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಕಾಲು ದಾರಿ ಹಾಗೂ ಬಂಡಿ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದರು, ಇದಕ್ಕೆ ನಾವು ತಹಶೀಲ್ದಾರ್ ರವರಿಗೆ ಪತ್ರದ ಮುಖಾಂತರ ಮಾಹಿತಿ ನೀಡಿದ್ದೇವೆ. ಅದಕ್ಕೆ ಇಂದು ಸರ್ವೇ ಇಲಾಖೆ ಹಾಗೂ ಕಂದಾಯ ಇಲಾಖೆ ಸರ್ವೇ ಕಾರ್ಯ ಕೈಗೊಂಡಿದ್ದಾರೆ. ಇದಕ್ಕೆ ಗ್ರಾಮ ಪಂಚಾಯಿತಿಯವರಿಗೆ ಮಾಹಿತಿ ನೀಡಿದ ಮೇರೆಗೆ ನಾವು ಭೇಟಿ ನೀಡಿದ್ದೇವೆ. ಕಂದಾಯ ಇಲಾಖೆಯವರು ರಸ್ತೆ ತೆರವುಗೊಳಿಸಿಕೊಟ್ಟಲ್ಲಿ ನಾವು ಈ ರಸ್ತೆಗೆ ಬೇಕಾದ ಅನುದಾನವನ್ನು ಮೀಸಲಿಡುತ್ತೇವೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಲೋಕೇಶ್ ಮಾತನಾಡಿ, ಇದು ಕಾಪಳರ ಕಾಲೋನಿಗೆ ತೆರಳುವ ರಸ್ತೆ. ಇದರ ಸರ್ವೇ ಕಾರ್ಯ ನಡೆದು ರಸ್ತೆ ತೆರವುಗೊಂಡಲ್ಲಿ ಇವರಿಗೆ ಬೇಕಾದ ಸೌಲಭ್ಯ ಒದಗಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಭರತ್ ಚಂದ್ರ ದೇವಯ್ಯ, ಕುಡಿಯರ ಪ್ರಕಾಶ್ ಇವರುಗಳು ಮಾತನಾಡಿ ಕಳೆದ ೨೦ ವರ್ಷದಿಂದ ಈ ರಸ್ತೆಯ ಸಮಸ್ಯೆ ತಲೆದೋರಿದೆ. ಕೂಡಲೇ ನಮ್ಮ ನಕ್ಷೆಯಲ್ಲಿ ಇರುವ ರಸ್ತೆಯನ್ನು ನಮಗೆ ಒದಗಿಸಿಕೊಡಿ ಎಂದರು.

ರೆಸಾರ್ಟ್ ಮಾಲೀಕ ‘ಶಕ್ತಿ’ಯೊಂದಿಗೆ ಮಾತನಾಡಿ, ತಾನು ಕಳೆದ ೪೦ ವರ್ಷಗಳಿಂದ ವಾಸವಾಗಿದ್ದೇನೆ. ೨೦೨೩ ರಲ್ಲಿ ನಮ್ಮ ಜಾಗದಲ್ಲಿ ರಸ್ತೆ ಇದೆ ಎನ್ನುತ್ತಿದ್ದಾರೆ. ಆದರೆ ಡಿಸಿ, ಎಸಿ ಗೆ ಮಾಹಿತಿ ನೀಡಿದ್ದಾಗ ರಸ್ತೆ ಇಲ್ಲ ಎಂಬುದು ಸಾಬೀತಾಗಿದೆ. ಲೋಕಾಯುಕ್ತಕ್ಕೂ ದೂರು ನೀಡಿದರು ಅಲ್ಲಿ ಕೂಡ ದಾಖಲಾತಿಗಳನ್ನು ಪರಿಶೀಲಿಸಿ ಅದರಲ್ಲೂ ರಸ್ತೆ ಇಲ್ಲ ಅಂತ ಸಾಬೀತಾಗಿದೆ. ಲೋಕಾಯುಕ್ತ ಆದೇಶ ಹಾಗೂ ಡಿಸಿ ಆದೇಶ ಇದ್ದರೂ ಕೂಡ ಇವತ್ತು ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ. ಹೈಕೋರ್ಟ್ನಿಂದ ಸರ್ವೇಗೆ ತಡೆಯಾಜ್ಞೆ ಇದ್ದರೂ ಕೂಡ ಸರ್ವೇ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭ ಗ್ರಾಮ ಲೆಕ್ಕಿಗ ಜನಾರ್ಧನ, ಸರ್ವೇಯರ್ ಪ್ರದೀಪ್ ಕುಮಾರ್, ಗ್ರಾಮಸ್ಥರಾದ ಪಾಂಡAಡ ಜೆ. ನರೇಶ್, ಅಪ್ಪಾರಂಡ ಅಪ್ಪಣ್ಣ, ಪ್ರಕಾಶ್, ಕುಡಿಯರ ಗಣೇಶ್, ಸುಬ್ರಮಣ್ಯ, ಭರತ್, ಧನು ಹಾಗೂ ಗ್ರಾಮಸ್ಥರು ಇದ್ದರು. - ಅಶ್ರಫ್