ಕುಶಾಲನಗರ, ಆ. ೧೩: ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಹಾಗೂ ತಾಲೂಕು ಅಧ್ಯಕ್ಷರುಗಳ ನಾಮನಿರ್ದೇಶನವು ಕುಶಾಲನಗರದ ಜ್ಞಾನವಾಣಿ ಕಚೇರಿಯಲ್ಲಿ ನಡೆಯಿತು.
ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ್ ಮೌರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯನ್ನು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಪ್ರಾರಂಭಿಸಲಾಯಿತು. ಸಭೆಯಲ್ಲಿ ಮುಂದಿನ ಕಾರ್ಯಕ್ರಮದ ರೂಪುರೇಷೆ ಹಾಗೂ ತಾಲೂಕು ಘಟಕಗಳ ಸಮಿತಿಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ದಸಾಪ ಉಪಾಧ್ಯಕ್ಷರಾಗಿ ರಾಜೀವ್ ಪಿ, ಕಾರ್ಯದರ್ಶಿಯಾಗಿ ಡಾ. ಕಾವೇರಿ, ಖಜಾಂಚಿಯಾಗಿ ಗಿರೀಶ್, ಮಾಧ್ಯಮ ಹಾಗೂ ಪತ್ರಿಕಾ ಸಲಹೆಗಾರರಾಗಿ ಸತೀಶ್ ಕುಮಾರ್, ಕಾನೂನು ಸಲಹೆಗಾರರಾಗಿ ಜಯೇಂದ್ರ, ನಿರ್ದೇಶಕರುಗಳಾಗಿ ಜಯಪ್ಪ ಹಾನಗಲ್, ಮಂಜುಳ ಜೆ.ಕೆ, ರಘುರಾಜ್, ನಾಗರಾಜ್ ಹಾಗೂ ಸರೋಜ ಬಿ.ಡಿ ಅವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಲಹಾ ಮಂಡಳಿಗೆ ಡಾ. ಜೆ. ಸೋಮಣ್ಣ, ವಿ.ಪಿ. ಶಶಿಧರ್, ವಿದ್ಯಾಧರ, ರಾಮ್ ಕುಮಾರ್, ರಾಜೇಶ್ ಪದ್ಮನಾಭ ಅವರುಗಳನ್ನು ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಯಿತು.
ಅಕ್ಟೋಬರ್ ತಿಂಗಳಿನಲ್ಲಿ ರಾಯಚೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಪೂರ್ವತಯಾರಿ ಹಾಗೂ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವ ಗಣ್ಯರುಗಳ ಶಿಫಾರಸ್ಸು ಪಟ್ಟಿಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನು ಡಾ. ಕಾವೇರಿ, ನಿರೂಪಣೆಯನ್ನು ಸತೀಶ್ ಡಿ.ಪಿ. ವಂದನಾರ್ಪಣೆಯನ್ನು ಮಂಜುಳ ಜೆ.ಕೆ ನಿರ್ವಹಿಸಿದರು.