ಕುಶಾಲನಗರ, ಆ. ೧೩: ೧೯೪೭ರ ಆಗಸ್ಟ್ ೧೪ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಕರಾಳ ರಾತ್ರಿಯ ದುರಂತವನ್ನು ನೆನಪಿಸಿ ಕಳೆದುಹೋದ ಭಾಗಗಳನ್ನು ಮತ್ತೆ ಒಂದುಗೂಡಿಸುವ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ ಕಾರ್ಯಕ್ರಮ ಕುಶಾಲನಗರದಲ್ಲಿ ತಾ. ೧೪ ರಂದು (ಇಂದು) ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕುಶಾಲನಗರದ ಪ್ರಮುಖರು ತಿಳಿಸಿದ್ದಾರೆ.
ಈ ಬಗ್ಗೆ ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವೇದಿಕೆಯ ಸಂಪರ್ಕ ಪ್ರಮುಖರಾದ ಎಲ್ ಹರೀಶ್ ಮಾತನಾಡಿ ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಸಂಜೆ ೬.೩೦ಕ್ಕೆ ಪಂಜಿನ ಮೆರವಣಿಗೆ ಕಾರ್ಯಕ್ರಮ ಆರಂಭವಾಗಲಿದೆ. ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಗ್ರಾಮಗಳಿಂದ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಶಾಲನಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ನಂತರ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಒದಗಿಸಿದರು.
ನಂತರ ರೈತ ಸಹಕಾರ ಭವನದಲ್ಲಿ ನ್ಯಾಯಾಂಗ ಇಲಾಖೆಯ ನಿವೃತ್ತ ಅಧಿಕಾರಿ ಹಾ ತಿ ಜಯಪ್ರಕಾಶ್, ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಕಾಂತ ಶೆಟ್ಟಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ಒದಗಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಪ್ರಮುಖರಾದ ಕೆ. ದಿನೇಶ್, ವಿ.ಎಚ್. ಪ್ರಶಾಂತ್ ಎಂ.ಕೆ. ಪ್ರಜ್ವಲ್ ಕೆ.ಎ. ಆಶಿತ್ ಇದ್ದರು.