ಸಿದ್ದಾಪುರ, ಆ. ೧೩: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು.
ಕುಶಾಲನಗರ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಅಭ್ಯತ್ಮಂಗಲ, ನೆಲ್ಯಹುದಿಕೇರಿ, ಅತ್ತಿಮಂಗಲ, ಅರೆಕಾಡು ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ವಸತಿ ಪ್ರದೇಶಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನೆಲ್ಯಹುದಿಕೇರಿಯ ಸಹಕಾರ ಸಂಘದ ಸಭಾಂಗಣದಲ್ಲಿ ಸಭೆ ನಡೆಸಿ ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಬೆಳಗ್ಗಿನಿಂದಲೇ ಕಾರ್ಯಾಚರಣೆ ನಡೆಸಿದರು. ಕಾಡಾನೆಗಳ ಗುಂಪಿನಲ್ಲಿದ್ದ ಕಾಡಾನೆಗಳು ಬೇರ್ಪಟ್ಟಿದ್ದು ಕಾರ್ಯಾಚರಣೆ ತಂಡಕ್ಕೆ ಎರಡು ಸಲಗಗಳು ಕಂಡುಬAದಿವೆ ಎಂದು ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ಸುಬ್ರಾಯ ತಿಳಿಸಿದ್ದಾರೆ. ಈ ಸಲಗಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಸಾಕಷ್ಟು ಪ್ರಯತ್ನಪಟ್ಟರೂ ಕಾಫಿ ತೋಟಗಳಿಂದ ಕದಲಲು ಹಿಂದೇಟು ಹಾಕಿದವು. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ವೇಗವಾಗಿ ಓಡುತ್ತಾ ಕಾರ್ಯಾಚರಣೆ ತಂಡದಿAದ ತಪ್ಪಿಸಿಕೊಂಡು ಮತ್ತೆ ತೋಟದತ್ತ ಲಗ್ಗೆ ಇಡಲು ಯತ್ನಿಸುತ್ತಿತ್ತು ಎಂದು ತಿಳಿಸಿದರು. ಆದರೂ ಛಲ ಬಿಡದ ತಂಡವು ಕಾಫಿ ತೋಟಗಳಿಂದ ದುಬಾರೆ ಅರಣ್ಯಕ್ಕೆ ಅಟ್ಟಲು ಪ್ರಯತ್ನಿಸಿದರೂ ಮೇರಿ ಲ್ಯಾಂಡ್ ಕಾಫಿ ತೋಟದೊಳಗೆ ಉಳಿದುಕೊಂಡಿವೆ.
ಕಾಡಾನೆಗಳು ಅರಣ್ಯಕ್ಕೆ ತೆರಳದಿದ್ದಲ್ಲಿ ಮತ್ತೆ ೧೪ರಂದು (ಇಂದು) ಕಾರ್ಯಾಚರಣೆ ಮುಂದುವರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಡಿಸಿಎಫ್ ಭಾಸ್ಕರ್ ಮಾರ್ಗದರ್ಶನದಲ್ಲಿ ಎಸಿಎಫ್ ಎ.ಎ. ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಕೂಡಕಂಡಿ ಸುಬ್ರಾಯ, ಸಿಬ್ಬಂದಿಗಳು, ಆನೆ ಕಾರ್ಯಪಡೆ ಹಾಗೂ ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಭಾಗವಹಿಸಿದ್ದರು.