ಕೂಡಿಗೆ, ಆ. ೧೨: ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ ಕರ್ನಾಟಕ ಸುವರ್ಣ ಸಂಭ್ರಮ, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜನ್ಮ ಶತಮಾನೋತ್ಸವ ಅಂಗವಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ದಿ, ಟಿ.ಬಿ. ಬಸಪ್ಪ ಅವರ ಜ್ಞಾಪಕಾರ್ಥ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟವನ್ನು ಹೊಸಳ್ಳಿಯಲ್ಲಿರುವ ಟಿ.ಬಿ. ಜಗದೀಶ್ ಅವರ ಗದ್ದೆಯಲ್ಲಿ ಆಯೋಜಿಸಿತ್ತು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕೆಸರಿನಲ್ಲಿ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಕ್ರೀಡಾಕೂಟ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚು ಒತ್ತು ನೀಡಬೇಕು, ಆ ಮೂಲಕ ಗ್ರಾಮಾಂತರ ಪ್ರದೇಶಗಳ ಗ್ರಾಮಸ್ಥರು, ಯುವಕರು, ರೈತರು ಒಗ್ಗೂಡಲು ಸಹಕಾರಿಯಾಗುತ್ತದೆ ಎಂದರು. ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳ ಬೆಳವಣಿಗೆಗೆ ಇಂತಹ ಕ್ರೀಡಾಕೂಟಗಳು ಸಹಕಾರಿ ಎಂದರು.
ಅಧ್ಯಕ್ಷತೆಯನ್ನು ತೊರೆನೂರು ಗ್ರಾಮ ಕೃಷಿಕರಾದ ಟಿ.ಬಿ. ಪಾರ್ವತಮ್ಮ ಬಸಪ್ಪ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಕನ್ನಡ ಸಿರಿ ಸ್ನೇಹ ಬಳಗ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿದರು.
ಪುರುಷರ ವಾಲಿಬಾಲ್, ಮಹಿಳೆಯರ ಥ್ರೋ ಬಾಲ್, ಹಗ್ಗಜಗಾಟ, ಬಾಲಕ, ಬಾಲಕಿಯರ ೧೦೦ ಮೀಟರ್ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆದವು.
ಈ ಸಂದರ್ಭ ತೊರೆನೂರು ಸಹಕಾರ ಸಂಘದ ಸದಸ್ಯರಾದ ಟಿ.ಬಿ. ಜಗದೀಶ್, ಚಂದ್ರಪ್ಪ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಟಿ.ಕೆ. ಪಾಂಡುರAಗ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ನಿರ್ದೇಶಕ ಕೆ.ಎಸ್ ಕೃಷ್ಣ ಗೌಡ, ಪ್ರಮುಖರಾದ ಸಂಗಮೇಶ, ಕುಮಾರ್, ಚಂದ್ರು, ರಾಜಪ್ಪ, ಮಂಜುನಾಥ ಆಚಾರಿ, ಮನು ಸೇರಿದಂತೆ ಗದ್ದೆಹೊಸಳ್ಳಿ ಗ್ರಾಮದ ಪ್ರಮುಖರು ಹಾಜರಿದ್ದರು. ವಿಜೇತ ತಂಡಗಳಿಗೆ ಬಿ.ಎಸ್ ಲೋಕೇಶ್ ಸಾಗರ್ ಬಹುಮಾನ ವಿತರಣೆ ಮಾಡಿದರು.