ಕುಶಾಲನಗರ, ಆ. ೧೨: ಆಟಿ ೧೮ರ ಅಂಗವಾಗಿ ಕುಶಾಲನಗರ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ಮಹಿಳಾ ಸ್ವಸಹಾಯ ಸಂಘ, ಗೌಡ ಸಮಾಜ ಮತ್ತು ಗೌಡ ಯುವಕ ಸಂಘ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆ ಸಂಯುಕ್ತ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು.

ಸ್ಥಳೀಯ ಗೌಡ ಸಮಾಜದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪೋರೆನ ನಾಗವೇಣಿ ಆಟಿ ಹಬ್ಬದ ಮಹತ್ವದ ಬಗ್ಗೆ ಮಾಹಿತಿ ಒದಗಿಸಿದರು.

ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಅವರು ಕಾರ್ಯಕ್ರಮಕ್ಕೆ ಶುಭ ಕೋರಿ ಮುಂದಿನ ದಿನಗಳಲ್ಲಿ ಗೌಡ ಸಮಾಜ ಮತ್ತು ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ವಿಜೃಂಭಣೆಯಿAದ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸೂದನ ಗೋಪಾಲ್ ಮಾತನಾಡಿ, ಹಬ್ಬ ಹರಿದಿನಗಳು ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೀಯಂಡಿ ಶಾಂತಿ ರಾಜು ಅವರ ನೇತೃತ್ವದಲ್ಲಿ ಆಹಾರ ಖಾದ್ಯಗಳ ಪ್ರದರ್ಶನ ನಡೆಯಿತು.

ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಚೆರಿಯಮನೆ ರಿಷಿ ಹರೀಶ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ದೇವಜನ ಚಿನ್ನಪ್ಪ ಸಮಾಜದ ಪ್ರಮುಖರು ಸದಸ್ಯರು ಹಾಗೂ ಮಹಿಳಾ ಸಂಘದ ಸದಸ್ಯರು ಇದ್ದರು. ಆಟಿ ಹಬ್ಬದ ವಿಶೇಷ ಖಾದ್ಯಗಳಾದ ಹಲ್ವಾ, ಕಣಿಲೆ ಸಾರು, ಇಡ್ಲಿ, ಹಲಸಿನ ಖಾದ್ಯ, ಪತ್ರೊಡೆ, ಮರಗೆಣಸು ಮತ್ತು ಪಾಯಸ ಮತ್ತಿತರ ತಿಂಡಿಗಳನ್ನು ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದು ಪ್ರದರ್ಶನಕ್ಕೆ ಇಟ್ಟಿದ್ದರು.