ರಾಜ್ಯದ ಬೆಳವಣಿಗೆಯನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದರೆ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಇದು. ನಾವೇನೋ ಚುನಾವಣಾ ಸಂದರ್ಭದಲ್ಲಿ ನಮಗೆ ತೋಚಿದ ಪಕ್ಷಕ್ಕೆ, ಅಭ್ಯರ್ಥಿಗೆ ಒಟು ಹಾಕಿ ಮುಂದಿನ ದಿನಗಳಲ್ಲಿ ನಮಗೆ, ನಮ್ಮ ಊರಿಗೆ, ಜಿಲ್ಲೆಗೆ, ರಾಜ್ಯಕ್ಕೆ ಏನೋ ಕಡಿದು ಕಟ್ಟೆ ಹಾಕುತ್ತಾರೆ ಎಂಬ ಹುಸಿ ನಿರೀಕ್ಷೆಯಲ್ಲಿರುತ್ತೇವೆ. ಆದರೆ ಆ ನಿರೀಕ್ಷೆಗಳೆಲ್ಲವೂ ಹುಸಿಯಾಗಿಯೇ ಉಳಿದುಬಿಡುತ್ತವೆ ಎಂಬ ಸತ್ಯವೂ ನಮಗೆ ತಿಳಿಯದ ವಿಷಯವೂ ಅಲ್ಲ. ಮತ್ತೆ ಐದು ವರ್ಷಗಳು ಕಳೆದು ಮತ್ತೆ ಯಾವುದೋ ಪಕ್ಷಕ್ಕೋ, ಅಭ್ಯರ್ಥಿಗೋ ಮತ ಒತ್ತಲು ತಯಾರಾಗುತ್ತೇವೆ.
ಮತ ಹಾಕುವುದಷ್ಟೇ ನಮ್ಮ ಕರ್ತವ್ಯ. ಮತ ಕೇಳುವುದೂ ಅಭ್ಯರ್ಥಿಗಳ ಕರ್ತವ್ಯ. ಯಾರೇ ಆಗಲಿ ಗೆದ್ದು ಹೋದ ಮೇಲೆ ವರಸೆಗಳೇ ಬೇರೆ. ಆರಿಸಿ ಕಳುಹಿಸಿದ ಮತದಾರ ನಂತರ ಗೌಣ. ನಾವ್ಯಾರೋ...ಅವರು ಯಾರೋ. ಯಾರೋ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನಾನಾ ಇಲಾಖೆಯ ಮಂತ್ರಿಗಳಾಗುತ್ತಾರೆ. ಎಲ್ಲವೂ ಮುಗಿದು ಮುಂದಿನ ಐದು ವರ್ಷ ಹಿಂದಿನ ಸರ್ಕಾರಕ್ಕಿಂತ ಉತ್ತಮ ಆಡಳಿತ ನಡೆಸಿ ಮಾದರಿಯಾಗುತ್ತಾರೆ. ರಾಜ್ಯವನ್ನು ಉದ್ದಾರ ಮಾಡುತ್ತಾರೆ ಎಂಬ ಭಾವನೆ ಜನ ಸಾಮಾನ್ಯನದ್ದು. ಇವೆಲ್ಲ ಒಂದಷ್ಟು ವರ್ಷಗಳ ಹಿಂದೆ ಭಾಗಶಃ ನಡೆದಿರಬಹುದಾದ ವಿಷಯಗಳು.
ಆದರೆ ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣಿಗಳಿಂದ,ಜನಪ್ರತಿನಿಧಿಗಳಿAದ ಇವೆಲ್ಲವನ್ನೂ ಊಹಿಸಿಕೊಳ್ಳುವುದೂ ಕೂಡ ಅವರುಗಳನ್ನು ಆರಿಸಿ ಕಳುಹಿಸಿದ ಜನಸಾಮಾನ್ಯನ ಮುಠ್ಠಾಳತನವಾಗುತ್ತದೆ. ಪ್ರತಿ ಐದು ವರ್ಷಗಳಿಗೊಮ್ಮೆ ಮುಠ್ಠಾಳನಾಗುವುದೇ ಮತದಾರ ಪ್ರಭುವಿನ ಹಣೆಬರಹ!. ಹಾಗಂತ ಎಲ್ಲಾ ಜನಪ್ರತಿನಿಧಿಗಳಿಗೂ ಈ ಹಣೆಪಟ್ಟಿ ಕಟ್ಟಲಾರೆ.ಎಲ್ಲೋ ಬೆರಳೆಣಿಕೆಯ ಇಚ್ಛಾಶಕ್ತಿಯುಳ್ಳ ಜನಪ್ರತಿನಿಧಿಗಳೂ ನಮ್ಮ ನಿಮ್ಮ ನಡುವೆ ಇದ್ದಾರೆ.
ಪ್ರಸ್ತುತ ರಾಜಕೀಯ ದೊಂಬರಾಟವನ್ನು ಗಮನಿಸಿದರೆ ನಮ್ಮ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ರಾಜ್ಯದ, ರಾಜ್ಯದ ಜನತೆಯ ಉದ್ಧಾರಕ್ಕಾಗಿ ಉಳ್ಳವರಂತೂ ಖಂಡಿತಾ ಅಲ್ಲ ಎಂಬುದು ಸಾಬೀತಾಗುತ್ತಿದೆ. ಅಧಿಕಾರದ ಗದ್ದುಗೆ ಏರಿ ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಗಮನ ಕಾರ್ಯಗಳತ್ತ ಗಮನಹರಿಸದೇ ಕೇವಲ ಸ್ವಜನಪಕ್ಷಪಾತ, ಸ್ವ ಹಿತಾಸಕ್ತಿ ಇವುಗಳನ್ನೇ ಗುರಿಯಾಗಿಸಿಕೊಂಡು ಮುನ್ನಡೆಯುತ್ತಿರುವುದು ಜಗಜ್ಜಾಹೀರಾಗಿದೆ.
ಆಡಳಿತಾರೂಢ ಪಕ್ಷ ಚುನಾವಣಾ ಮುಂಚಿತವಾಗಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡAತೆ ಬಿಟ್ಟಿ ಭಾಗ್ಯಗಳ ಪೂರೈಕೆಗೆ ಬೇಕಾದ ಸಂಪನ್ಮೂಲಗಳ ಕ್ರೋಢೀಕರಣದ ಗೋಜಲಲ್ಲೇ ಒಂದಷ್ಟು ಕಾಲ ಕಳೆದು ಆ ಭಾಗ್ಯಗಳು ಎಲ್ಲಿ ಹೋದವು ಎಂದು ಹುಡುಕುವ ಜವಾಬ್ದಾರಿಯನ್ನು ಆ ಭಾಗ್ಯವನ್ನು ಹೊಂದುವ ಪುಣ್ಯಾತ್ಮರಿಗೇ ಬಿಟ್ಟುಕೊಟ್ಟು ಬೇರೊಂದಷ್ಟು ಸಮಯ ಕಳೆಯುವ ವಿಷಯಗಳಲ್ಲಿ ತೊಡಗಿಸಿಕೊಂಡುಬಿಟ್ಟಿದೆ.
ಇನ್ನು ರಾಜಕಾರಣಿಗಳಿಗೆ ಸದ್ಯದ ಬಿಡುವಿಲ್ಲದ ರಾಜಕಾರ್ಯವೇನೆಂದರೆ ಪರಸ್ಪರ ಕೆಸರೆರಚಾಟ. ಅವಕಾಶವಿದೆ ಆದಷ್ಟು ದೋಚಿಕೊಂಡು ಬಿಡೋಣ ಎಂದು ಬಿಲಗಳನ್ನು ಹುಡುಕುವುದು. ಹಗರಣಗಳ ಸುರಿಮಳೆ, ಹಗರಣಗಳನ್ನು ಬೀದಿಗೆಳೆದ ವ್ಯಕ್ತಿ ಅಥವಾ ಪಕ್ಷಗಳ ಮೇಲೇ ಇನ್ನೊಂದಷ್ಟು ಹಗರಣಗಳನ್ನು ಹೇರುವ ಹುನ್ನಾರ, ಒಂದನ್ನು ಮುಚ್ಚುವ ತರಾತುರಿಯಲ್ಲಿ ಮತ್ತೊಂದಷ್ಟು ಹಗರಣಗಳನ್ನು ಮೈಮೇಲೆ ಎಳೆದುಕೊಳ್ಳುವ ಕಸರತ್ತು, ಹಗರಣಗಳ ಪೈಪೋಟಿಯಲ್ಲಿ ಒಂದು ಪಕ್ಷದ ಪಾದಯಾತ್ರೆ. ಮತ್ತೊಂದು ಪಕ್ಷದ ಸಮಾವೇಶ, ದೋಷಾರೋಪಣೆಗಳ ಕೈಪಿಡಿ ಬಿಡುಗಡೆ, ಅಬ್ಬಬ್ಬಾ ಒಂದೇ ಎರಡೇ. ಇವೆಲ್ಲದರ ನಡುವೆ ರಾಜ್ಯದ ಜನತೆಯ ಹಿತಾಸಕ್ತಿಯ ಚಿಂತನೆ ಶೂನ್ಯ. ಈ ಎಲ್ಲಾ ದೊಂಬರಾಟವನ್ನು ಮಾಧ್ಯಮಗಳಲ್ಲಿ ನೋಡುತ್ತಿರುವ, ಇವರನ್ನು ಚುನಾಯಿಸಿ ಕಳುಹಿಸಿದ ಜನಸಾಮಾನ್ಯ ಮೂಕಪ್ರೇಕ್ಷಕ.
ನಮ್ಮ ಜನಪ್ರತಿಧಿಗಳನ್ನು ನಾವು ಬಿಸಿಲೋ ಮಳೆಯೋ ಏನೇ ಇರಲಿ ಸಂವಿಧಾನ ಬದ್ಧವಾಗಿ ನಮಗಿರುವ ಮತದಾನದ ಹಕ್ಕನ್ನು ಚಲಾಯಿಸಿ ಗೆಲ್ಲಿಸಿ ಕಳುಹಿಸುತ್ತೇವೆ. ಯಾಕೆಂದರೆ ನಮ್ಮನ್ನು ಉದ್ಧರಿಸಲೀ ಎಂದು. ಆದರೆ ನಾವು ಆರಕ್ಕೇರದೇ, ಮೂರಕ್ಕಿಳಿಯದೇ ಇದ್ದಲ್ಲೇ ಇರುತ್ತೇವೆ. ಹೇಗೆನ್ನುತ್ತೀರೋ....ಆರಿಸಿ ಹೋದ ಜನನಾಯಕ ಬಿಟ್ಟಿ ಸೇವೆ ಮಾಡುತ್ತಾನೆಯೇ. ಖಂಡಿತಾ ಇಲ್ಲ. ಒಂದಷ್ಟು ಸಾವಿರಗಳ ಸರ್ಕಾರಿ ವೇತನ, ಯಾವ್ಯಾವುದೋ ಬಾಪ್ತುಗಳ ಭತ್ಯೆ, ನಿಂತರೂ ದುಡ್ಡು, ಕುಂತರೂ ದುಡ್ಡು. ಹೀಗೇ ಕೂಡಿ ಗುಣಿಸಿದರೆ ಒಂದಷ್ಟು ಲಕ್ಷಗಳೇ ಆಗಿಬಿಡುತ್ತವೆ. ಇವೆಲ್ಲಾ ಜನರ ದುಡ್ಡು. ಇನ್ನು ಬೇರೆ ವ್ಯವಸ್ಥೆಗಳೂ ಇದ್ದೇ ಇರುತ್ತವೆ ಎನ್ನುವುದೂ ತಿಳಿದಿರುವ ವಿಷಯವೇ. ಇಷ್ಟೆಲ್ಲಾ ಇದ್ದೂ ಇವರೆಲ್ಲಾ ಮಾಡುವುದೇನು? ಆಡಳಿತ ಮಂಡಳಿಯಲ್ಲಿ ಕುಳಿತು ನೀತಿರೂಪಿಸಿ ಆಡಳಿತದಲ್ಲಿ ಅನುಷ್ಠಾನಕ್ಕೆ ತರಬೇಕಾದ ಇವರುಗಳು ಇದ್ದಷ್ಟು ಕಾಲ ಅಧಿಕಾರಕ್ಕಾಗಿ ಹೋರಾಟ, ಸ್ವ ಹಿತಾಸಕ್ತಿ, ಆಸ್ತಿಗಳಿಕೆ, ಸಂಪತ್ತುಗಳಿಕೆ ಇವಷ್ಟಕ್ಕೇ ಸೀಮಿತರಾಗುತ್ತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಕನಿಷ್ಟ ಪಕ್ಷ ನಾವು ಜನರ ಮತದಿಂದ ಆರಿಸಿ ಬಂದವರು, ಅವರುಗಳಿಗಾಗಿ ವಿಧಾನ ಸೌಧ, ಪರಿಷತ್‌ಗಳಲ್ಲಿ ಅಧಿವೇಶನ ನಡೆಯುವಾಗ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು ಎಂಬ ಕನಿಷ್ಟ ಜ್ಞಾನವೂ ಇವರಿಗಿಲ್ಲದೆ ಕೇವಲ ತಮ್ಮ ಪ್ರತಿಷ್ಟೆಯನ್ನು ಮೆರೆಯುವ ಸ್ಥಳವಾಗಿ ಸದನವನ್ನು ಬಳಸಿಕೊಳ್ಳುತ್ತಿರುವುದು ನಮ್ಮ ದುರದೃಷ್ಟ.
ಕಳೆದ ಅಧಿವೇಶನವನ್ನು ಅವಲೋಕಿಸಿ ಸದನ ನಡೆದಷ್ಟು ದಿನವೂ ವಿರೋಧ ಪಕ್ಷಗಳು ತಾವಿರುವುದು ಕೇವಲ ವಿರೋಧಿಸಲು ಎಂಬ ಏಕ ರಾಗವನ್ನು ಹಿಡಿದು ಒಂದೇ ಹಗರಣದ ವಿಷಯದಲ್ಲಿ ಗದ್ದಲ ಎಬ್ಬಿಸಿದ್ದೇ ಇವರ ಸಾಧನೆ. ಅದನ್ನು ಸಮರ್ಥಿಸಿಕೊಂಡದ್ದೇ ಆಡಳಿತಾರೂಢರ ಸಾಧನೆ. ಹಗರಣದ ಮೇಲೆ ಹಗರಣಗಳು,ಒಬ್ಬರ ಮೇಲೊಬ್ಬರ ಹಗರಣಗಳ ಕೆಸರೆರಚಾಟ.
ಹಗರಣಗಳ ಗದ್ದಲ ಇದೀಗ ಬೀದಿಗೂ ಬಂದಾಯಿತು.....ಇದು ಸದ್ಯಕ್ಕೆ ಮುಗಿಯುವ ಅಂದಾಜಿಲ್ಲ. ಹಾಗಾಗಿ ಆಡಳಿತ ಪಕ್ಷದಿಂದಾಗಲೀ, ವಿರೋಧ ಪಕ್ಷದಿಂದಾಗಲೀ, ಅವುಗಳೊಳಗಿರುವ ನಮ್ಮ ಘನ ಜನಪ್ರತಿನಿಧಿಗಳಿಂದಾಗಲೀ ನಾವು ಸದ್ಯಕ್ಕೆ ಏನನ್ನೂ ನಿರೀಕ್ಷಿಸುವಂತಿಲ್ಲ. ಹಗರಣಗಳ ಎಳೆ ಎಳೆದುಕೊಂಡೇ ಆಡಳಿತ ಪಕ್ಷ, ವಿರೋಧ ಪಕ್ಷ ಐದು ವರ್ಷಗಳನ್ನು ಪೂರೈಸಿಬಿಡುತ್ತವೆ. ಒಟ್ಟಾರೆ ನಮ್ಮ ಬಣ್ಣ ಬಯಲಾಗದಿದ್ದರೆ ಸಾಕು ಎಂಬ ತರಾತುರಿಯಲ್ಲಿ ಎಲ್ಲರೀ ಇದ್ದಂತಿದೆ... ಸದ್ಯದ ಸಂದರ್ಭಗಳನ್ನು ಗಮನಿಸಿದರೆ ಸ್ಥಾನ ಮಾನಗಳೊಂದಿಗೆ ತಮ್ಮ ಅಧಿಕಾರದ ಅಹಂನಿAದ ಎಲ್ಲರೂ ಲೆಕ್ಕಕ್ಕೂ ಮೀರಿ ಅಕ್ರಮ ಸಂಪತ್ತು, ಚರ ಸ್ಥಿರಾಸ್ತಿಗಳನ್ನು ಮಾಡಿಕೊಂಡು ಇದೆಲ್ಲಕ್ಕೂ ಅವಕಾಶ ಮಾಡಿಕೊಟ್ಟ ತನ್ನ ಮತದಾರನನ್ನು ಮಾತ್ರ ನಿನ್ನ ಯೋಗ್ಯತೆ ಇಷ್ಟೇ...ನೀನು ಐದು ವರ್ಷಕ್ಕೊಮ್ಮೆ ಮತ ನೀಡುತ್ತಾ ಮುಠ್ಠಾಳನಾಗಿಯೇ ಇರು ಎಂದು ಮತ್ತೆ ಮತ್ತೆ ಯಾಮಾರಿಸುತ್ತಲೇ ಇದ್ದಾರೆ...ಮುಂದೆಯೂ ಯಾಮಾರಿಸುತ್ತಲೇ ಇರುತ್ತಾರೆ..
ನಾವೆಲ್ಲಾ ಕಣ್ಣು ಬಾಯಗಲಿಸಿಕೊಂಡು ರಾಜಕಾರಣಿಗಳ ಈ ಕಿರುಚಾಟ, ಕಚ್ಚಾಟ, ಕೆಸರೆರಚಾಟ, ಮರ್ಯಾದೆ ಮೀರಿದ ಬೈದಾಟ ಎಲ್ಲವನ್ನೂ ಕಣ್ಣು ಬಾಯಿ ಬಿಟ್ಟುಕೊಂಡು ಮಾಧ್ಯಮಗಳಲ್ಲಿ ನೋಡುತ್ತಾ ಪರಪರನೆ ಮೈ ಕೆರೆದುಕೊಳ್ಳುತ್ತಿದ್ದರೆ, ಮಹಾನ್ ರಾಜಕಾರಣಿಗಳು ಹಗಲು ಒಬ್ಬರ ಮೇಲೊಬ್ಬರು ಎಗರಾಡಿ ರಾತ್ರಿ ಒಂದೇ ಟೇಬಲಲ್ಲಿ ಕುಳಿತು ಉಭಯ ಕುಶಲೋಪರಿ ನಡೆಸುತ್ತಿರುತ್ತಾರೆ. ಎಲ್ಲವೂ ಅಧಿಕಾರ ಪಡೆಯುವ ಹುನ್ನಾರದ ಪ್ರಹಸನ.ನಾವು ನೀವು ಈ ಪ್ರಹಸನ ವೀಕ್ಷಿಸುವ ಮುಠ್ಠಾಳ ಮತದಾರರು.
ಕೊನೆಗೂ ಉದ್ಭವಿಸುವ ಪ್ರಶ್ನೆ ಒಂದೇ... ‘ಅವರ್ ಬಿಟ್ಟ್ ಇವರ್ ಬಿಟ್ಟ್ ಇವರ್ಯಾರು’
ಇನ್ನು ಒಂದು ಕವಿವಾಣಿ ನೆನಪಾಗುತ್ತದೆ... ‘ಯಾರು ಹಿತವರು ನಿನಗೆ ಈ ಮೂವರೊಳಗೆ’
ಇದನ್ನು ಸ್ವಲ್ಪ ತಿರುಚಿ ಹೇಳುವುದಾದರೆ ‘ಯಾರು ಸಾಚಾ ಈ ಮಂದಿಯೊಳಗೆ’
-ಮಾದೇಟಿರ ಬೆಳ್ಯಪ್ಪ, ಕಡಗದಾಳು