ಕೋವರ್ಕೊಲ್ಲಿ ಇಂದ್ರೇಶ್
ಚಿಕ್ಕಮಗಳೂರು, ಆ. ೧೧: ಇನ್ನು ಮುಂದೆ ನೀವು ಹೊಂದಿರುವ ಕಾಫಿ ತೋಟಗಳನ್ನು ಇಷ್ಟ ಬಂದAತೆ ವಿಂಗಡಿಸಿ ಮಾರಾಟ ಮಾಡುವುದು ಸಾಧ್ಯವಾಗದಿರಬಹುದು. ದೊಡ್ಡ ಕಾಫಿ ತೋಟಗಳನ್ನು ಸಣ್ಣ ಭಾಗಗಳಾಗಿ ವಿಂಗಡಿಸಿ ಮಾರಾಟ ಮಾಡುವುದಕ್ಕೆ ರಾಜ್ಯ ಸರ್ಕಾರ ನಿರ್ಬಂಧ ಹೇರುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕಟಾರಿಯಾ ಅವರು, ಒಂದು, ಎರಡು ಎಕರೆಗಳ ತೋಟಗಳು ಲಾಭದಾಯಕವಲ್ಲ ಎಂದು ಹೇಳಿದರಲ್ಲದೆ ಕಾಫಿ ಮತ್ತು ಟೀ ತೋಟಗಾರಿಕೆಯಲ್ಲಿ ಗರಿಷ್ಟ ಎಕರೆವಾರು ಮಾರಾಟ ಮಿತಿ ಹೇರಿಕೆ ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ನೂರಾರು ಎಕರೆ ತೋಟಗಳನ್ನು ಒಂದು, ಎರಡು ಎಕರೆ ಭಾಗಗಳಾಗಿ ವಿಂಗಡಿಸಿ ಮಾರಾಟ ಮಾಡುವ ನೂರಾರು ಪ್ರಕರಣಗಳು ಅಡೆತಡೆಯಿಲ್ಲದೆ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು. ಈಗಾಗಲೇ ಈ ಕುರಿತು ಕಂದಾಯ ಇಲಾಖೆ ಕಾಫಿ ಮಂಡಳಿಗೆ ಪತ್ರ ಬರೆದಿದ್ದು ಕನಿಷ್ಟ ಎಷ್ಟು ಎಕರೆ ಕಾಫಿ ತೋಟ ಇದ್ದರೆ ಲಾಭದಾಯಕ ಎಂಬ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದರು.
ಕಾಫಿ ಮಂಡಳಿಯು ನೀಡುವ ಮಾಹಿತಿಯನ್ನು ಆದರಿಸಿ ದೊಡ್ಡ ತೋಟಗಳನ್ನು ಚಿಕ್ಕ ಭಾಗಗಳಾಗಿ ವಿಂಗಡಿಸಿ ಮಾರಾಟ ಮಾಡುವ ಕನಿಷ್ಟ ಮಿತಿಯನ್ನು ಹಾಕಲಾಗುವುದು ಎಂದು ಹೇಳಿದರು. ಸಣ್ಣ ತೋಟಗಳನ್ನು ಮಾರಾಟ ಮಾಡಿ ಅದರಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಹೇಳಿದ ಕಟಾರಿಯಾ ಅವರು ಈ ವಾಣಿಜ್ಯ ಚಟುವಟಿಕೆಯ ಸಂದರ್ಭಗಳಲ್ಲಿ ಅಪಾರ ಪ್ರಮಾಣದ ಮರಗಳನ್ನು ಕಡಿಯಲಾಗುತ್ತಿದೆ; ಇದರಿಂದ ಭೂಮಿಯ ಮಣ್ಣು ಸಡಿಲಗೊಂಡು ಮಳೆಗಾಲದಲ್ಲಿ ನೀರು ನುಗ್ಗಿ ಭೂ ಕುಸಿತ ಉಂಟಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಉದ್ದೇಶಿಸಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ದೊಡ್ಡ ತೋಟಗಳನ್ನು ವಿಂಗಡಣೆ ಮಾಡಿ ಪ್ರತ್ಯೇಕ ಸರ್ವೆ ನಂಬರ್ ನೀಡುವಂತೆ ಅರ್ಜಿ ಬಂದರೆ ಅದನ್ನು ಸ್ವೀಕರಿಸಬಾರದು ಎಂದರಲ್ಲದೆ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇದನ್ನು ನೋಂದಾಯಿಸಬಾರದು ಎಂದು ಹೇಳಿದರು.
ಅನೇಕ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ದೊಡ್ಡ ತೋಟಗಳನ್ನು ವಿಂಗಡಿಸಿ ಸಣ್ಣ ಭಾಗಗಳನ್ನಾಗಿ ಮಾಡಿ ವಿಲ್ಲಾ, ಫಾರ್ಮ್ಹೌಸ್ , ಹೋಂಸ್ಟೇ ಮಾಡಲು ನಗರ ಪ್ರದೇಶಗಳ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅರಣ್ಯ ನಾಶ ಆಗುತ್ತಿದ್ದು, ಭೂಮಿಯ ಮೇಲೆ ಮತ್ತು ಪರಿಸರಕ್ಕೆ ಅಪಾರ ಹಾನಿ ಆಗುತ್ತಿದ್ದು, ವಾಣಿಜ್ಯ ಚಟುವಟಿಕೆಗಳಿಂದ ಹೊರಬರುವ ತ್ಯಾಜ್ಯದಿಂದಾಗಿ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಕಳೆದ ೫ ವರ್ಷಗಳಿಂದ ಸಂಭವಿಸುತ್ತಿರುವ ಬಹುತೇಕ ಭೂಕುಸಿತಗಳಿಗೆ ವ್ಯಾಪಕ ಅರಣ್ಯ ನಾಶ ಮತ್ತು ಅವೈಜ್ಞಾನಿಕ ಗುಡ್ಡ ಅಗೆತ, ಕಾಂಕ್ರೀಟಿಕರಣವೇ ಕಾರಣ ಎಂದು ಭೂಗರ್ಭ ಶಾಸ್ತçಜ್ಞರು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.