ಚೆಯ್ಯಂಡಾಣೆ, ಆ. ೧೦: ಸ್ಥಳೀಯ ನರಿಯಂದಡ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಭತ್ತ ಬೆಳೆಯುವ ಗದ್ದೆ, ತೋಟಗಳಲ್ಲಿ ಕಾಡಾನೆ ಹಿಂಡುಗಳು ದಾಳಿ ನಡೆಸಿ ನಷ್ಟ ಉಂಟುಮಾಡುತ್ತಿರುವ ನಡುವೆಯೂ ಇಲ್ಲಿಯ ಗ್ರಾಮಸ್ಥರು ಕಾಡಾನೆ ದಾಳಿ ಮಾಡುತ್ತಿರುವ ಗದ್ದೆಯಲ್ಲೇ ನಾಟಿ ಮಾಡಿ ವಿಶೇಷತೆ ಮೆರೆದಿದ್ದಾರೆ.

ಕಳೆದ ತಿಂಗಳು ಚೆಯ್ಯಂಡಾಣೆ ಪಟ್ಟಣದಲ್ಲಿ ಕಾಡಾನೆ ಹಾವಳಿ ಸಮಸ್ಯೆ ತಡೆಗಟ್ಟಲು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ೧೫ ದಿನದ ಗಡುವು ನೀಡಿದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ, ರೈತರು ಕೃಷಿ ಚಟುವಟಿಕೆ ಕೈಗೊಳ್ಳುವ ಸಂದರ್ಭದಲ್ಲಿ ಗನ್ ಮೆನ್ ನಿಯೋಜಿಸುವ ಭರವಸೆ ಕೊಟ್ಟರೂ ಅದು ಕೂಡ ನಡೆದಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಇಂದಿನ ಕಾಲದಲ್ಲಿ ಭತ್ತದಕೃಷಿ ನಶಿಸುತ್ತಿರುವ ಸನ್ನಿವೇಶದಲ್ಲಿ ಇಲ್ಲಿನ ರೈತರು ಇರುವ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. ಅದು ಬೆಳೆಯದಿದ್ದರೆ ಕೃಷಿಕರ ಪಾಡೇನು ಅನ್ನುತ್ತಾರೆ ಇಲ್ಲಿನ ಕೃಷಿಕರು. ಯಾವುದನ್ನು ಲೆಕ್ಕಿಸದೆ ಕೃಷಿ ಭೂಮಿಯಲ್ಲಿ ಭತ್ತದ ನಾಟಿ ಕೆಲಸ ಮಾಡಿದ್ದೇವೆ. ಅರಣ್ಯ ಇಲಾಖೆ ನಾಟಿ ಕೆಲಸ ಮಾಡಿದ ಗದ್ದೆಯಲ್ಲಿ ಕಾಡಾನೆ ತುಳಿಯದ ರೀತಿಯಲ್ಲಿ ಕ್ರಮ ಕೈಗೊಳ್ಳ ಬೇಕು; ತುಳಿದರೆ ಕಷ್ಟಪಟ್ಟು ಮಾಡಿದ ಬೆಳೆಗಳೆಲ್ಲ ನಾಶವಾಗಲಿದೆ ಎಂದು ಭತ್ತ ಬೆಳೆದ ರೈತ ತೋಟಂಬೈಲು ಅನಂತ್ ಕುಮಾರ್ ಹೇಳಿದರು.

-ಅಶ್ರಫ್