ಶನಿವಾರಸಂತೆ, ಆ. ೯ : ಪ್ರಸ್ತುತ ಸಮಾಜದಲ್ಲಿ ಕಂಡುಬರುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧಿಯಾಗಿದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಕೊಡ್ಲಿಪೇಟೆಯ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀಗುರು ಪಂಚಾಕ್ಷರಿ ಶಿವಾಚಾರ್ಯರ ದತ್ತಿ “ಶರಣ ಸಂಸ್ಕೃತಿ ಪ್ರಸಾರ’’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಡಿನ ಸಾಂಸ್ಕೃತಿಕ ಅಧಃಪತನಕ್ಕೆ ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಬೇಜವಾಬ್ದಾರಿ ವರ್ತನೆಗಳೇ ಕಾರಣ. ಸಮಾಜದಲ್ಲಿಂದು ಘಟಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಹನ್ನೆರಡನೇ ಶತಮಾನದ ವಚನಕಾರರು ನೀಡಿದ ಸಾಮಾಜಿಕ ಸಂದೇಶಗಳು ಪರಿಹಾರವಾಗಿವೆ. ಬಸವೇಶ್ವರಾದಿ ಯಾಗಿ ವಚನಕಾರರು ನಡೆ - ನುಡಿಗಳೆರಡನ್ನು ಒಂದಾಗಿಸಿದ್ದರು. ಇಂದಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯದ ಅರಿವು ಮೂಲ ಮಂತ್ರವಾಗಿದೆ ಎಂದು ನುಡಿದರು.

ಸಾನಿಧ್ಯ ವಹಿಸಿದ್ದ ಕಲ್ಲುಮಠದ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡುತ್ತಾ ನವ ಸಮಾಜ ನಿರ್ಮಾಣಕ್ಕೆ ೧೨ನೇ ಶತಮಾನದಲ್ಲಿನ ಶರಣ ಪರಂಪರೆ ನೀಡಿರುವ ಕೊಡುಗೆ ಅಪಾರವಾದುದು. ಬಸವೇಶ್ವರರು ೯೦೦ ವರ್ಷಗಳ ಹಿಂದೆಯೇ ಅನುಭವ ಮಂಟಪ ಕಟ್ಟಿ ಎಲ್ಲಾ ಜಾತಿ - ಧರ್ಮಗಳ ಶರಣರನ್ನು ಇವನಾರವ ಎನ್ನದೇ ಇವ ನಮ್ಮವನೆಂದು ಪುರಸ್ಕರಿಸಿ ಸಮಾನತೆ ತಂದರು. ಇಂದು ಸರ್ಕಾರ ಮಾನವ ಹಕ್ಕುಗಳ ಆಯೋಗವನ್ನು ರಚಿಸಿದೆ. ಆದರೆ, ಬಸವಣ್ಣ ಅವರ ಕಾಲಾವಧಿಯಲ್ಲೆ ಸಮಾಜದಲ್ಲಿ ನೊಂದು-ಬೆAದವರಿಗೆ, ಕಡುಬಡವರಿಗೆ ಸಮನಾದ ನ್ಯಾಯ ನೀಡುತ್ತಿದ್ದರು ಎಂದರು.

ವಿದ್ಯಾಸAಸ್ಥೆ ಪ್ರಾಂಶುಪಾಲ ಮಹೇಶ್ ಮಾತನಾಡಿ, ಇನ್ನು ಮುಂದೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿತ್ಯವೂ ವಚನಗಳ ಅರಿವು ಮೂಡಿಸಿ ಕಲಿಸಲಾಗುವುದು ಎಂದರು.

ಕೊಡ್ಲಿಪೇಟೆಯ ಶ್ರೀ ಶಿವಕುಮಾರ್ ಸ್ವಾಮೀಜಿ ವಿದ್ಯಾಸಂಸ್ಥೆಯ ನಿರ್ದೇಶಕ ಹೆಚ್.ಎಂ. ದಿವಾಕರ್ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ, ಉಪನ್ಯಾಸಕ ಡಿ.ಪಿ. ಸತೀಶ್ ಅರಸ್ ಉಪಸ್ಥಿತರಿದ್ದರು. ಸಂಸ್ಥೆಯ ಅನುಷಾ ಮತ್ತು ಮೀನಾ ತಂಡದವರಿAದ ವಚನ ಗಾಯನ ನಡೆಯಿತು. ವಿದ್ಯಾರ್ಥಿನಿಯರಾದ ಅಲೀಮಾ ಸ್ವಾಗತಿಸಿ, ಯಶಸ್ವಿನಿ ವಂದಿಸಿದರು. ಸತೀಶ್ ನಿರೂಪಿಸಿದರು.