ಕುಶಾಲನಗರ, ಆ. ೯: ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಸದಸ್ಯರ ನಾಮನಿರ್ದೇಶನ ಮಾಡಿರುವ ಪ್ರಕ್ರಿಯೆ ನಿಯಮ ಬಾಹಿರ ಎಂದು ಪಟ್ಟಣ ಪಂಚಾಯಿತಿ ಮಾಜಿ ನಾಮನಿರ್ದೇಶಿತ ಸದಸ್ಯ ಕೆ.ಜಿ. ಮನು ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ೧೬ ಮಂದಿ ಚುನಾಯಿತ ಸದಸ್ಯರಿದ್ದು, ಮೂರು ಜನರನ್ನು ಮಾತ್ರ ಸರಕಾರದಿಂದ ನಾಮ ನಿರ್ದೇಶನ ಮಾಡಲು ಅವಕಾಶವಿದೆ.

ಆದರೆ ನಿಯಮಬಾಹಿರವಾಗಿ ಏಳು ಮಂದಿಯ ನಾಮನಿರ್ದೇಶನ ಮಾಡಲಾಗಿದೆ. ತಕ್ಷಣ ಹೆಚ್ಚುವರಿ ನಾಮನಿರ್ದೇಶಿತ ಸದಸ್ಯರನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದರಿಂದ ಸ್ಥಳೀಯ ಆಡಳಿತಕ್ಕೆ ಅನವಶ್ಯಕ ಹಣಕಾಸಿನ ಹೊರೆ ಉಂಟಾಗುತ್ತಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.