ಕಣಿವೆ, ಆ. ೯: ಕಾಡಾನೆಗಳ ಹಿಂಡು ಅಡಿಕೆ ತೋಟಕ್ಕೆ ಲಗ್ಗೆಯಿಟ್ಟು ನೂರಾರು ಸಂಖ್ಯೆಯ ಅಡಿಕೆ ಗಿಡಗಳನ್ನು ಧ್ವಂಸ ಮಾಡಿರುವ ಘಟನೆ ಕುಶಾಲನಗರ ತಾಲೂಕಿನ ಹೆರೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ಪ್ರಗತಿಪರ ಯುವ ಕೃಷಿಕರಾದ ಚಂದ್ರಶೇಖರ್ ಹಾಗೂ ಅರುಣಕುಮಾರ್ ಎಂಬ ಸೋದರರಿಗೆ ಸೇರಿದ ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು ನಾಲ್ಕು ವರ್ಷ ಪ್ರಾಯದ ಫಸಲು ಭರಿತ ಅಡಿಕೆ ಗಿಡಗಳನ್ನು ಮನಬಂದAತೆ ಕೆಳಗುರುಳಿಸಿ ತುಳಿದು ಚೆಲ್ಲಾಡಿ ತೆರಳಿರುವ ಚಿತ್ರಣ ಕಂಡ ಈ ಕೃಷಿಕರು ಕಣ್ಣೀರಿಟ್ಟರು.
ಮಕ್ಕಳಂತೆ ಸಾಕಿದ್ದ ಅಡಿಕೆ ಗಿಡಗಳನ್ನು ಬೇರು ಸಹಿತ ಕಿತ್ತು ಉರುಳಿಸಿ ಚೆಲ್ಲಾಡಿ ತೆರಳಿರುವ ಕಾಡಾನೆಗಳ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ಕೃಷಿಕರು ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಕಳೆದ ಎರಡು ತಿಂಗಳ ಹಿಂದಷ್ಟೇ ಎರಡು ಎಕರೆಯಲ್ಲಿದ್ದ ಮರಗೆಣಸನ್ನು ಕಿತ್ತು ತಿಂದು ಸಂಪೂರ್ಣವಾಗಿ ನಷ್ಟ ಮಾಡಿದ್ದವು. ಅದರಿಂದಲೂ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು. ಈಗ ಮತ್ತೆ ಲಕ್ಷಾಂತರ ರೂಪಾಯಿ ಫಸಲು ಕಾಡಾನೆಗಳ ಪಾಲಾಗಿದೆ.
ಒಂದೋ ಕಾಡಾನೆಗಳನ್ನು ಸಾಕಿ. ನಮ್ಮನ್ನು ಒಕ್ಕಲೆಬ್ಬಿಸಿ. ಇಲ್ಲವೇ ಕಾಡಾನೆಗಳನ್ನು ದೂರ ಅಟ್ಟಿ ನಮ್ಮನ್ನು ಉಳಿಸಿ ಎಂದ ಹಾನಿಯ ಕುರಿತು ಕೃಷಿಕರಾದ ಅರುಣಕುಮಾರ್ ಹಾಗೂ ಚಂದ್ರಶೇಖರ್ ತಮ್ಮ ಅಳಲು ತೋಡಿಕೊಂಡರು.
ಕೃಷಿಕ ಚಂದ್ರಶೇಖರ್ ಅವರ ತೋಟದಲ್ಲಿ ಐದೂವರೆ ವರ್ಷ ಪ್ರಾಯದ ೧೨೦ ಅಡಿಕೆ ಗಿಡಗಳು ನೆಲಕ್ಕುರುಳಿವೆ.
ಈ ಹಿಂದೆ ಮಾರ್ಚ್ ತಿಂಗಳಲ್ಲಿ ಆಗಿದ್ದ ಬೆಳೆಹಾನಿಯ ಪರಿಹಾರವನ್ನೇ ಇದೂವರೆಗೂ ನೀಡಿಲ್ಲ. ಎಲ್ಲಾ ಪರಿಹಾರವನ್ನು ಕೂಡಲೇ ನೀಡದಿದ್ದಲ್ಲಿ ಅರಣ್ಯ ಇಲಾಖೆ ಬಳಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಚಂದ್ರಶೇಖರ್ ಹೇಳಿದ್ದಾರೆ.
ಕಾಡಾನೆಗಳಿಂದ ಹಾನಿಯಾದ ಅಡಿಕೆ ತೋಟಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಭೇಟಿ ನೀಡಿ ಪರಿಶೀಲಿಸಿದರು.
ಕಾಡಾನೆ ಪೀಡಿತ ಗ್ರಾಮಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆತಂದು ಮುಂದೆ ಯಾವ ಕಾಡಾನೆ ಹಾವಳಿ ತಡೆಯಲು ಯಾವ ಯೋಜನೆ ಹಮ್ಮಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುವುದು.
ಶೀಘ್ರದಲ್ಲಿಯೇ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ ರೈತರ ಅಭಿಪ್ರಾಯಗಳನ್ನು ಪರಿಗಣಿಸ ಲಾಗುವುದು ಎಂದು ರತನ್ ಹೇಳಿದರು.
ಈಗಾಗಲೇ ನಷ್ಟಗೊಂಡ ಅಡಿಕೆ ಫಸಲಿಗೆ ಇಲಾಖೆಯಿಂದ ದೊರಕುವ ಪರಿಹಾರವನ್ನು ನೀಡಲಾಗುತ್ತದೆ ಎಂದರು.
ವರದಿ : ಕೆ.ಎಸ್. ಮೂರ್ತಿ