ಸುಂಟಿಕೊಪ್ಪ, ಆ. ೮: ಹಾಸನದ ಖಾಸಗಿ ಸುದ್ಧಿವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೋರ್ವ ಹರದೂರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಾಸನದ ಕದಲಿ ಗ್ರಾಮದ ನಿವಾಸಿ ಹೇಮಂತ್ (೨೭) ಮನೆಯಿಂದ ಬುಧವಾರದಂದು ನಾಪತ್ತೆಯಾಗಿರುವ ಬಗ್ಗೆ ಹೇಮಂತ್ ಅವರ ತಂದೆ ಪದ್ಮರಾಜ್ ಅವರು ಹಾಸನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರದೂರು ಹೊಳೆಯ ಬದಿಯಲ್ಲಿ ಹೇಮಂತ್ ಅವರ ದ್ವಿಚಕ್ರ ವಾಹನ (ಕೆಎ೪೭ವಿ೨೫೩೦) ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯದ ಮೇರೆ ಸುಂಟಿಕೊಪ್ಪ ಪೊಲೀಸರು ಹುಡುಕಾಟ ನಡೆಸಿದ ಮೇರೆ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹವನ್ನು ಕುಶಾಲನಗರ ತಾಲೂಕು ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.