ಮಡಿಕೇರಿ, ಆ. ೮: ಸಮಸ್ತ ಕೇರಳ ಜಂಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ವತಿಯಿಂದ ನಡೆಸುತ್ತಿರುವ ಮುಅಲ್ಲಿಂ ಡೇ ಹಯ್ಯಾತುಲ್ ಇಸ್ಲಾಂ ಅರಬ್ಬಿ ಮದರಸದ ಆಡಳಿತ ಮಂಡಳಿ ಅಧ್ಯಾಪಕರಿಂದ ಪ್ರಥಮ ಬಾರಿಗೆ ಮಡಿಕೇರಿಯಲ್ಲಿ ನಡೆಯಿತು.

ಒಂದು ವಾರದಿಂದ ಮದರಸದ ಉಸ್ತಾದ್ ಮತ್ತು ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಕಾರ್ಯಕ್ರಮ ನಡೆಸಲಾಯಿತು. ಮದರಸದ ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳ ಸಮ್ಮುಖದಲ್ಲಿ ಖಬರ್ ಝಿಯಾರತ್ ನಡೆಯಿತು. ಉಸ್ತಾದರು, ಮೃತಪಟ್ಟ ಹಿರಿಯರು, ಬಂಧು- ಬಳಗಗಳ ಹೆಸರಿನಲ್ಲಿ ದುಆ ನಡೆಸಿದರು. ನಂತರ ಅರಬ್ಬಿ ಶಾಲೆಯಲ್ಲಿ ಕಾರ್ಯಕ್ರಮಗಳು ನಡೆದವು.

ಬದ್ರಿಯಾ ಮಸೀದಿಯ ಅಧ್ಯಕ್ಷ ಅಮೀನ್ ಮೊಹಿಸಿನ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ಬಾಖಮಿ, ಅಲಿಯಾರ್ ಮುಸ್ಲಿಯಾರ್, ಹನೀಫ ಫೈಝಿ ಗುಂಡಿಗೆರೆ, ಮಾಹಿನ್ ಅಬೂಬಕ್ಕರ್ ದಾರಿಮಿ, ತಮ್ಲೀಕ್ ದಾರಿಮಿ, ಅಲಿ ಲತೀಫ್, ಆರಿಫ್ ಫೈಝಿ, ಸಮದ್ ಮುಸ್ಲಿಯಾರ್ ಅವರುಗಳಿಂದ ಪ್ರಾರ್ಥನೆ, ಕಿರಾಅತ್, ಭಾಷಣ ನಡೆಯಿತು. ಮಕ್ಕಳು ಕಲಿಕೆಯಲ್ಲಿ ಪ್ರಾಮುಖ್ಯತೆ ಕೊಡುವುದರೊಂದಿಗೆ ಜೀವನದಲ್ಲಿ ಮೊದಲು ಮೌಲ್ಯ, ಜೀವನದ ರೀತಿ, ನೀತಿಗಳನ್ನು ಅಳವಡಿಸಿಕೊಳ್ಳಬೇಕು. ತಂದೆ - ತಾಯಿಗೆ ನೋವು ತರುವಂತಹ ವಿಷಯವನ್ನು ಮಾಡಬಾರದು ಎಂದು ಮನವರಿಕೆ ಮಾಡಿದರು. ಉಸ್ತಾದ್ ಮಕ್ಕಳಿಗೆ ಸಿಹಿ ಪದಾರ್ಥಗಳನ್ನು, ಪಾನೀಯಗಳನ್ನು ಹಂಚಿದರು. ಇದೇ ಸಂದರ್ಭ ಕಲಿಕೆಯಲ್ಲಿ ಮತ್ತು ಬರಹಗಳಲ್ಲಿ ಉತ್ತಮವಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಕ್ತಿ ಪತ್ರಿಕೆಯಲ್ಲಿ ಪ್ರಕಟಿಸಿದ ‘ಮುಅಲ್ಲಿಂ ಡೇಯ ಶುಭಾಶಯಗಳು’ ಎಂಬ ವಿಷಯದ ಲೇಖನಕ್ಕೆ ಮಹಮ್ಮದ್ ಸೂಫಿಯಾನ್ ಎಂಬ ವಿದ್ಯಾರ್ಥಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ರಾತ್ರಿ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ದಾನಿಗಳ ಸಹಾಯದಿಂದ ಮಾಡಲಾಯಿತು.