ನಾಪೋಕ್ಲು, ಆ. ೮: ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ನಾಟಿ ಮಾಡಿದ ಭತ್ತದ ಗದ್ದೆಗಳು ಹಾನಿಗೀಡಾಗಿವೆ.
ಗ್ರಾಮದ ಕೃಷಿಕರಾದ ಚೋಯಮಾಡಡ ಪೂಣಚ್ಚ, ವಿಜು ಮೊಣ್ಣಪ್ಪ, ಸರು ಅಪ್ಪಚ್ಚು ಅವರ ಗದ್ದೆಗಳಲ್ಲಿ ಲಗ್ಗೆಯಿಟ್ಟ ಕಾಡಾನೆಗಳು ನಾಟಿ ಮಾಡಿದ್ದ ಪೈರುಗಳನ್ನು ತುಳಿದು ನಾಶಪಡಿಸಿವೆ. ಸಮೀಪದ ಕಾಫಿ ತೋಟಗಳಿಗೂ ಹಾನಿಯಾಗಿದೆ.
ಕಳೆದ ಹತ್ತು ದಿನಗಳಿಂದ ಕಾಡಾನೆಗಳು ಸುತ್ತಮುತ್ತ ಸಂಚರಿಸುತ್ತಿದ್ದು, ಸಮಸ್ಯೆ ಉಂಟಾಗಿದೆ. ಕಾಡಾನೆಗಳ ಸಮಸ್ಯೆ ಪರಿಹರಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ. ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟಿದರೂ ಮತ್ತೆ ಮತ್ತೆ ದಾಳಿ ಮಾಡುತ್ತಿರುವುದರಿಂದ ಕೃಷಿಕರಿಗೆ ಸಮಸ್ಯೆ ಆಗಿದೆ ಎಂದು ಪಂಚಾಯಿತಿ ಸದಸ್ಯ ಹರೀಶ್ ಮೊಣ್ಣಪ್ಪ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
- ದುಗ್ಗಳ.