ಸೋಮವಾರಪೇಟೆ, ಆ. ೭: ಕೊಣನೂರು-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಮಸಗೋಡು ಗ್ರಾಮದ ತಿರುವಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ತೆರವುಗೊಳಿಸಲಾಗಿದ್ದು, ಸವಾರರು ಹಾಗೂ ಸ್ಥಳೀಯರು ನಿರಾಳರಾಗಿದ್ದಾರೆ.
ಕಾಫಿ ತೋಟದಲ್ಲಿದ್ದ ಕಾಡುಜಾತಿಯ ಮರವೊಂದು ಆ ಬದಿಯಿಂದ ಈ ಬದಿಗೆ ಬಾಗಿ ನಿಂತಿದ್ದು, ಗಾಳಿ-ಮಳೆಗೆ ನೆಲಕ್ಕುರುಳುವ ಸ್ಥಿತಿಯಲ್ಲಿತ್ತು. ಒಂದು ವೇಳೆ ಮರ ಬಿದ್ದರೆ ವಿದ್ಯುತ್ ತಂತಿಗಳ ಸಹಿತ, ಕಂಬಗಳು ನೆಲಕ್ಕುರುಳುತ್ತಿದ್ದವು. ಭಾರೀ ಗಾಳಿ-ಮಳೆಗೆ ಈಗಾಗಲೇ ನೂರಾರು ಮರಗಳು ಬಿದ್ದು, ನಷ್ಟ ಸಂಭವಿಸಿದ್ದು, ರಸ್ತೆಯ ಪಕ್ಕದಲ್ಲಿಯೇ ಬಾಗಿ ನಿಂತಿದ್ದ ಈ ಮರದಿಂದಾಗಿ ವಾಹನ ಸವಾರರು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಯಾತಂಕದಿAದಲೇ ತೆರಳುತ್ತಿದ್ದರು.
ಈ ಬಗ್ಗೆ ತಾ. ೩ರ ‘ಶಕ್ತಿ’ಯಲ್ಲಿ ‘ಮಸಗೋಡು ರಾಜ್ಯ ಹೆದ್ದಾರಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರ’ ಶೀರ್ಷಿಕೆಯಡಿ ವರದಿ ಮೂಲಕ ಗಮನ ಸೆಳೆಯಲಾಗಿತ್ತು. ಇದೀಗ ಮರವನ್ನು ತೆರವುಗೊಳಿಸಲಾಗಿದ್ದು, ಸಂಭವನೀಯ ಅಪಾಯ ತಪ್ಪಿದೆ.