ವೀರಾಜಪೇಟೆ, ಆ. ೭: ಎಲ್ಲಾ ಜಾತಿ ಜನಾಂಗಗಳಿಗೆ ಅದರದ್ದೇ ಆದ ಆಚಾರ, ವಿಚಾರ ಪದ್ಧತಿ ಪರಂಪರೆ ಇದೆ. ಕೊಡವ ಜನಾಂಗ ಕೂಡ ತನ್ನದೇ ಆದ ಸಂಸ್ಕೃತಿ ಆಚಾರ, ವಿಚಾರ ಪದ್ಧತಿ ಪರಂಪರೆಗಳನ್ನು ಹೊಂದಿದ್ದು, ಬೇರೆ ಜನಾಂಗ ಕೊಡವ ಪದ್ಧತಿಯನ್ನು ಅನುಕರಣೆ ಮಾಡುವುದನ್ನು ಬಿಡಬೇಕು. ಇಲ್ಲವಾದರೆ ಕೊಡಗಿನ ಎಲ್ಲಾ ಸಂಘ ಸಂಸ್ಥೆಗಳ ಜೊತೆಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೆರ ಮನು ಕುಮಾರ್ ಹೇಳಿದರು.
ವೀರಾಜಪೇಟೆ ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ವೀರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಕಕ್ಕಡ ನಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊಡವ ಪದ್ಧತಿ ಪರಂಪರೆಗಳನ್ನು ಹಿರಿಯರ ಕಾಲದಿಂದಲೂ ಉತ್ತಮವಾಗಿ ನಡೆಸಿಕೊಂಡು ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಯಾವ ರೀತಿಯಲ್ಲು ಅಪಚಾರ ಆಗಬಾರದು. ಕೊಡವ ಜನಾಂಗದ ಯಾವುದೇ ಸಭೆ ಸಮಾರಂಭದಲ್ಲಿ ನಾವುಗಳು ಅನ್ಯ ಜನಾಂಗದ ಆಚಾರ ವಿಚಾರ ಪದ್ಧತಿಗಳನ್ನು ಅನುಕರಿಸುವುದಿಲ್ಲ. ಹಾಗೆಯೇ ಅನ್ಯ ಜನಾಂಗದವರು ನಮ್ಮ ಪದ್ಧತಿ ಪರಂಪರೆಗಳಿಗೆ ಅಪಮಾನ ಆಗುವ ರೀತಿಯಲ್ಲಿ ಆಚಾರ ವಿಚಾರಗಳನ್ನು ಅನುಕರಿಸುವ ಹಕ್ಕಿಲ್ಲ. ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಕೊಡವ ಸಾಹಿತ್ಯ ಅಕಾಡೆÀಮಿಯ ಪಾತ್ರ ಮಹತ್ವದಾಗಿರುತ್ತದೆ ಎಂದು ಹೇಳಿದರು.
ಗೋಣಿಕೊಪ್ಪ ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಕಕ್ಕಡದ ವಿವಿಧ ಬಗೆಯ ಖಾದ್ಯದ ಪೈಪೋಟಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಕೊಡಗಿನಲ್ಲಿ ಜೂನ್ನಿಂದ ಆಗಸ್ಟ್ ತಿಂಗಳವರೆಗೆ ಕೃಷಿ ಚಟುವಟಿಕೆ ಜೊತೆಗೆ ಪ್ರಾಕೃತಿಕವಾಗಿ ದೊರೆಯುವ ಏಡಿ, ಅಣಬೆ, ಮೀನು, ಮರಕೆಸ ಇತ್ಯಾದಿ ಖಾದ್ಯಗಳನ್ನು ಸವಿಯುವ ಕಾಲವಾಗಿರುತ್ತದೆ. ಆದರೆ ಇತ್ತೀಚಿನ ಪ್ರಕೃತಿ ವೈಪರೀತ್ಯದಿಂದ ಅವುಗಳ ಸಂಖ್ಯೆ ಕೂಡ ಕ್ಷೀಣಿಸುತ್ತಿದೆ. ಅದರಿಂದ ಕೊಡಗಿನಲ್ಲಿ ಸಂಪನ್ಮೂಲಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಆಚಾರ ವಿಚಾರ ಪದ್ಧತಿಗಳ ಜೊತೆಗೆ ಪ್ರಕೃತಿಯನ್ನು ಸಹ ಉಳಿಸಬೇಕು. ಮುಂದಿನ ಪೀಳಿಗೆಯ ಮಕ್ಕಳಿಗೆ ಎಲ್ಲವನ್ನು ಕಲಿಸಬೇಕಾಗಿದೆ ಎಂದು ಹೇಳಿದರು.
ವೀರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಕೊಡವ ಮಹಿಳೆಯರಲ್ಲಿ ಪ್ರತಿಭೆ ಅಡಗಿದೆ. ಮನೆಯ ಕೆಲಸ ಕಾರ್ಯಗಳೊಂದಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಲು ವೇದಿಕೆ ಸೃಷ್ಟಿ ಮಾಡಲಾಗಿದೆ. ಕೊಡವರ ಆಚಾರ ಸಂಸ್ಕೃತಿಯನ್ನು ಉಳಿಸಬೇಕೆಂಬ ಧ್ಯೇಯಯನ್ನು ನಾವು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂದೆ ಕಾವೇರಿಯ ಮಣ್ಣಿನಲ್ಲಿ ಏನೇ ತೊಂದರೆಗಳಾದರು ಮಹಿಳೆಯರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಬೇಕು. ಕೊಡವ ಸಮಾಜಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಪರಿಸರ ಕಾಳಜಿಯ ಬಗ್ಗೆ ನಿಗಾ ವಹಿಸುವ ಮೂಲಕ ಪ್ರಕೃತಿಗೆ ಅಪಚಾರವಾಗದಂತೆ ನೋಡಿಕೊಳ್ಳಬೇಕು. ಕೊಡವ ಭಾಷೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದ್ದು ಕೊಡವ ಅಕಾಡೆಮಿ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ನಮ್ಮ ಭಾಷೆ, ಸಂಸ್ಕೃತಿಯನ್ನು, ಆಚಾರ ವಿಚಾರಗಳನ್ನು ನಾವೆಲ್ಲ ಒಂದಾಗಿ ಉಳಿಸಿ ಬೆಳೆಸಿಕೊಂಡು ಬರುತ್ತಿದ್ದೇವೆ. ಕೊಡವರ ಹಬ್ಬ ಎಂದರೆ ಕೇವಲ ತಿಂದು ಕುಡಿಯುವುದು ಮಾತ್ರ ಅಲ್ಲ. ಎಲ್ಲಾ ಹಬ್ಬಗಳಿಗೆ ಅದರದ್ದೇ ಆದ ಮಹತ್ವಗಳಿರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಕೃಷಿಗೆ ಅತ್ಯಂತ ಮಹತ್ವವನ್ನು ನೀಡುತ್ತಿದ್ದು, ಕೇರಳ ರಾಜ್ಯ ವಯನಾಡಿನ ದುರಂತಕ್ಕೆ ಹೋಲಿಸಿದಾಗ ನಮ್ಮಲ್ಲಿ ಆದ ಪ್ರಕೃತಿ ವಿಕೋಪ ಕಡಿಮೆ. ಕಾರಣ ನಮ್ಮ ಮಣ್ಣಿನಲ್ಲಿ ಸಂಸ್ಕೃತಿ ಭಾಷೇ ಆಚಾರಗಳನ್ನು ಉತ್ತಮವಾಗ ಪಾಲಿಸಿಕೊಂಡು ಬರುತ್ತಿರುವ ಕಾರಣ ತಾಯಿ ಕಾವೇರಿ ನಮ್ಮ ಮಣ್ಣನ್ನು ಉಳಿಸಿದ್ದಾಳೆ ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಅಜ್ಜಿಕುಟ್ಟಿರ ಗಿರೀಶ್, ಸದಸ್ಯರಾದ ನಾಯಕಂಡ ಬೇಬಿ ಚಿಣ್ಣಪ್ಪ, ಪೊನ್ನಿರ ಗಗನ್, ಪುತ್ತರಿರ ಪಪ್ಪು ತಿಮ್ಮಯ್ಯ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಕೊಂಡಿಜಮ್ಮನ ಬಾಲಕೃಷ್ಣ, ಕುಡಿಯರ ಕಾವೇರಪ್ಪ, ನಾಯಂದಿರ ಶಿವಾಜಿ, ಚೆಪ್ಪುಡಿರ ಉತ್ತಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಗಣೇಶ್, ಪೊಮ್ಮಕ್ಕಡ ಕೂಟದ ಗೌರವ ಕಾರ್ಯದರ್ಶಿ ಬಯವಂಡ ಇಂದಿರಾ ಉಪಸ್ಥಿತರಿದ್ದರು. ಪೊಮ್ಮಕ್ಕಡ ಕೂಟದಿಂದ ಕೊಡವ ನೃತ್ಯ, ಕುಡಿಯ ಜನಾಂಗದವರಿAದ ಉರುಟ್ಟಿಕೊಟ್ಟ್ ಪಾಟ್, ಮತ್ತಿತತರ ಕಾರ್ಯಕ್ರಮ ನಡೆಯಿತು.