ಸಿದ್ದಾಪುರ, ಆ. ೭: ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೈಗೊಂಡರು.

ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೂ ಒಳಪಡುವ ಇಂಜಿಲಗೆರೆ, ಗುಹ್ಯ, ಕರಡಿಗೋಡು, ಕಣ್ಣಂಗಾಲ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ಹಾಗೂ ಕೃಷಿ ಫಸಲುಗಳನ್ನು ಹಾನಿಗೊಳಿಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರದಂದು ಕಾರ್ಯಾಚರಣೆ ನಡೆಸಲಾಯಿತು. ಗುಹ್ಯ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭ ೪ ಮರಿಯಾನೆಗಳು ಸೇರಿದಂತೆ ೯ಕ್ಕೂ ಅಧಿಕ ಆನೆಗಳು ಕಂಡುಬAದವು. ಇವುಗಳಲ್ಲಿ ಆನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ತಿಳಿಸಿದರು.

ಕಾಡಾನೆಗಳ ಗುಂಪುಗಳು ಕಾರ್ಯಾಚರಣೆ ತಂಡಗಳನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸಿದವು. ಎಷ್ಟೇ ಪ್ರಯತ್ನ ಪಟ್ಟರೂ ಕಾಫಿ ತೋಟಗಳಿಂದ ಕಾಡಾನೆಗಳು ರಸ್ತೆಗೆ ಬರಲು ಹಿಂದೇಟು ಹಾಕಿದವು. ಆದರೂ ಕೂಡ ಛಲ ಬಿಡದ ಕಾರ್ಯಾಚರಣೆ ತಂಡವು ಸಾಕಷ್ಟು ಪ್ರಯತ್ನಪಟ್ಟು ರಸ್ತೆಗೆ ದಾಟಿಸಿದರು. ಸಾರ್ವಜನಿಕ ರಸ್ತೆಯ ಮೂಲಕ ಕೆಲವು ಕಾಡಾನೆಗಳು ಕಾಡಿನತ್ತ ಹೆಜ್ಜೆ ಹಾಕಿದವು. ಆದರೆ ಕಾಡಾನೆಗಳ ಗುಂಪಿನಲ್ಲಿ ಬೇರ್ಪಟ್ಟಿರುವ ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಉಳಿದುಕೊಂಡಿವೆ. ಕಾಫಿ ತೋಟಗಳಲ್ಲಿ ಕೆಸರಿನ ನಡುವೆ ಕಾರ್ಯಾಚರಣೆ ನಡೆಸಲು ಸಾಕಷ್ಟು ಸಮಸ್ಯೆಗಳು ಎದುರಾದವು. ಕಾರ್ಯಾಚರಣೆ ತಂಡವು ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಶ್ರಮಿಸಿತು. ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿ ಹಾಕಿದ್ದು, ಇಂತಹ ಕಾಡಾನೆಗಳು ತೋಟ ಬಿಟ್ಟು ಕದಲುತ್ತಿಲ್ಲ. ಗುಹ್ಯ ಭಾಗದಲ್ಲಿ ೨೫ಕ್ಕೂ ಅಧಿಕ ಕಾಡಾನೆಗಳು ದಿನನಿತ್ಯ ಸುತ್ತಾಡುತ್ತಿದ್ದು, ಹಲವಾರು ಕಾಫಿ ಬೆಳೆಗಾರರ ಕೃಷಿ ಫಸಲುಗಳನ್ನು ಹಾನಿಗೊಳಿಸಿವೆ. ಕಾಡಾನೆಗಳ ಹಾವಳಿಯಿಂದಾಗಿ ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ.

ವೀರಾಜಪೇಟೆ ಡಿಸಿಎಫ್ ಜಗನ್ನಾಥ್ ಮಾರ್ಗದರ್ಶನ, ವಲಯ ಅರಣ್ಯ ಅಧಿಕಾರಿ ಶಿವರಾಮ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅಧಿಕಾರಿ ಸಂಜೀತ್ ಸೋಮಯ್ಯ, ಅರಣ್ಯ ರಕ್ಷಕ ಅರುಣ್, ಸಿಬ್ಬಂದಿಗಳಾದ ಅಚ್ಚಯ್ಯ, ವಿನೋದ್, ಸಚಿನ್, ಗಣೇಶ್, ಅಖಿಲೇಶ್, ವಿನು, ಪ್ರವೀಣ್, ಅರಣ್ಯ ಇಲಾಖೆ ಸಿಬ್ಬಂದಿಗಳು, ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಭಾಗವಹಿಸಿದ್ದರು.

-ವರದಿ: ವಾಸು