ಸಿದ್ದಾಪುರ, ಆ. ೬: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನೆಲ್ಯಹುದಿಕೇರಿಯ ಆನೆ ಮಾನವ ಸಂಘರ್ಷ ತಡೆ ಸಮಿತಿ ವತಿಯಿಂದ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ನೆಲ್ಯಹುದಿಕೇರಿಯ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಾಫಿ ಬೆಳೆಗಾರರು ಹಾಗೂ ನಿವಾಸಿಗಳು ಕಾಡಾನೆ ಹಾವಳಿಯಿಂದ ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊAಡರು.
ಸಭೆಯಲ್ಲಿ ಗ್ರಾಮಸ್ಥ ಭರತ್ ಮಾತನಾಡಿ, ನೆಲ್ಯಹುದಿಕೇರಿ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ಗ್ರಾಮದಲ್ಲಿ ಕಾಡಾನೆಗಳು ಇಲ್ಲದ ಜಾಗವೇ ಇಲ್ಲದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಹಾಗೂ ಮಕ್ಕಳು ಜೀವಭಯದಲ್ಲೇ ಬದುಕುವಂತಾಗಿದೆ ಎಂದರು.
ಅಲ್ಲದೆ ಕಾಡಾನೆ ಹಾವಳಿಗೆ ಕಾಫಿ ಬೆಳೆಗಾರರು, ಸಣ್ಣ ಬೆಳೆಗಾರರ ಬೆಳೆಗಳನ್ನು ನಾಶಪಡಿಸುತ್ತಿದ್ದು, ಅರಣ್ಯ ಇಲಾಖೆಯು ಪರಿಹಾರದ ರೂಪದಲ್ಲಿ ಇಂತಿಷ್ಟು ಹಣ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಬೆಳೆಗಾರರಿಗೆ ಅರಣ್ಯ ಇಲಾಖೆಯ ಬೆಳೆ ಪರಿಹಾರ ಬೇಕಿಲ್ಲ ಶಾಶ್ವತ ಪರಿಹಾರ ಬೇಕಿದೆ ಎಂದು ಒತ್ತಾಯಿಸಿದರು.
ಬೆಳೆಗಾರರಾದ ಕೆ.ಎನ್. ವಾಸು ಮಾತನಾಡಿ, ಕಾಡಾನೆ ಹಾವಳಿ ಹೆಚ್ಚಾಗಿದ್ದು ಬೆಳೆದ ಬೆಳೆಗಳು ಕೈಗೆಟುಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಕಳೆದ ಕೆಲವು ತಿಂಗಳುಗಳಿAದ ಕಾಡಾನೆ ಹಾವಳಿಗೆ ಕಾಫಿ ತೋಟಕ್ಕೆ ತೆರಳದಂತಾಗಿದೆ. ಕಾಡಾನೆಗಳಿಂದ ಒಂದೆಡೆ ಬೆಳೆನಾಶವಾಗಿದ್ದರೆ ಇನ್ನೊಂದೆಡೆ ಮಂಗಗಳ ಕಾಟ ಹೆಚ್ಚಾಗಿದೆ. ಅರಣ್ಯ ಇಲಾಖೆ ಕಾರ್ಯಾಚರಣೆ ಹೆಸರಿನಲ್ಲಿ ಹಣವನ್ನು ಪೋಲು ಮಾಡುವ ಬದಲು ಶಾಶ್ವತ ಕ್ರಮಕ್ಕೆ ಮುಂದಾಗಲೆAದು ಒತ್ತಾಯಿಸಿದರು.
ಗಾಯಗೊಂಡವರಿಗಿಲ್ಲ ಪರಿಹಾರ: ಜಿ.ಜಿ. ಪಿಂಟೋ ಮಾತನಾಡಿ, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಅರಣ್ಯ ಇಲಾಖಾಧಿಕಾರಿಗಳು ಮಾತನಾಡಿ ತೆರಳುತ್ತಾರೆ. ಗಾಯಗೊಂಡ ಕಾರ್ಮಿಕರ ವೆಚ್ಚವನ್ನು ನಾವೇ ಭರಿಸಬೇಕಾಗಿದೆ. ಈ ಒಂದು ವರ್ಷಗಳಲ್ಲಿ ಕಾರ್ಮಿಕರಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ ಅರಣ್ಯ ಇಲಾಖೆ ಯಾವುದೇ ನೆರವನ್ನು ನೀಡಲಿಲ್ಲ ಎಂದು ಆರೋಪಿಸಿದರು.
ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಕಾಡಾನೆಗಳು ಎಲ್ಲಿಂದ ಬರುತ್ತಿದೆ ಎಂಬುದು ತಿಳಿಯದಂತಾಗಿದೆ ಎಂದು ಎಸಿಎಫ್ ಗೋಪಾಲ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ನೆಲ್ಯಹುದಿಕೇರಿ ಗ್ರಾಮವು ಮಡಿಕೇರಿ,ತಿತಿಮತಿ ಅರಣ್ಯಕ್ಕೆ ಸಮೀಪವಿರುವ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯ ಸಂದರ್ಭದಲ್ಲಿ ಒಂದು ಕಡೆ ಕಾಡಾನೆಗಳನ್ನು ಕಾಡಿಗಟ್ಟಿದರೆ ಮತ್ತೊಂದು ಕಡೆಯಿಂದ ಬೇರೆ ಆನೆಗಳು ಗ್ರಾಮಕ್ಕೆ ಲಗ್ಗೆ ಇಡುತ್ತಿರುವುದು ಇಲಾಖೆಗೆ ತಲೆನೋವಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು. ಅಲ್ಲದೆ ರೈಲ್ವೆ ಬ್ಯಾರಿಕೇಡ್ ಕಾಮಗಾರಿಗಳು ಪೂರ್ಣಗೊಂಡರೆ ಸಮಸ್ಯೆ ಬಗೆ ಹರಿಯಲಿದೆ ಎಂದರು.
ಕಾಡಾನೆ ಹಾವಳಿಯಿಂದ ತತ್ತರಿಸಿರುವ ನೆಲ್ಯಹುದಿಕೇರಿ ಗ್ರಾಮದ ಗ್ರಾಮಸ್ಥರು ಕಾಡಾನೆ ಹಾವಳಿಯನ್ನು ತಡೆಗಟ್ಟದಿದ್ದಲ್ಲಿ ರಸ್ತೆ ತಡೆಗಳ ಮೂಲಕ ಬೃಹತ್ ಹೋರಾಟ ನಡೆಸುವುದಾಗಿ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಆನೆ ಮಾನವ ಸಂಘರ್ಷ ತಡೆ ಸಮಿತಿ ಸಭೆಯಲ್ಲಿ ಸಾರ್ವಜನಿಕರ ಒತ್ತಾಯಕ್ಕೆ ಅರಣ್ಯ ಇಲಾಖೆಯು ಗುರುವಾರದಂದು ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗುವುದೆಂದು ಎಸಿಎಫ್ ಗೋಪಾಲ್ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ, ಆನೆ ಮಾನವ ಸಂಘರ್ಷ ಸಮಿತಿ ಪ್ರಮುಖರಾದ ವಸಂತ್ ಕುಮಾರ್, ಧರ್ಮಲಿಂಗ, ಬಾನುಪ್ರಕಾಶ್, ಕೋಯಾ, ಇನ್ನಿತರರು ಹಾಜರಿದ್ದರು. - ವರದಿ : ವಾಸು