ಸೋಮವಾರಪೇಟೆ, ಆ. ೬: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರು ಮಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ೪೫ ಲೀಟರ್ ಕಳ್ಳಭಟ್ಟಿ ಹಾಗೂ ೧೮೦ ಲೀಟರ್ ಪುಳಗಂಜಿಯನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಹಿತ್ತಲಗದ್ದೆಯಲ್ಲಿ ನಡೆದಿದೆ.

ಹಿತ್ತಲಗದ್ದೆ ನಿವಾಸಿ ಎಂ.ಕೆ. ತೀರ್ಥಕುಮಾರ್ ತನ್ನ ಮನೆಯ ಬಳಿಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ದಾಳಿ ನಡೆಸಿದ ಅಧಿಕಾರಿಗಳು, ಕಳ್ಳಭಟ್ಟಿ, ಪುಳಗಂಜಿ ಸಹಿತ ಕಳ್ಳಭಟ್ಟಿ ತಯಾರಿಕೆಗೆ ಬಳಸುತ್ತಿದ್ದ ಇತರ ಪರಿಕರಗಳನ್ನು ವಶಕ್ಕೆ ಪಡೆದುಕೊಂಡು, ತೀರ್ಥಕುಮಾರ್ ವಿರುದ್ಧ ಅಬಕಾರಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕಿ ಆರ್.ಎಂ. ಚೈತ್ರ, ಉಪ ನಿರೀಕ್ಷಕಿ ಕೆ.ವಿ. ಸುಮತಿ, ಅಬಕಾರಿ ಪೇದೆಗಳಾದ ಮಹಾದೇವ ಗಡ್ಡಿ, ಕಾಂತರಾಜ್ ಅವರುಗಳು ಭಾಗವಹಿಸಿದ್ದರು.