ವೀರಾಜಪೇಟೆ, ಆ. ೬: ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಅಸಹಜವಾಗಿ ಸಾವನ್ನಪ್ಪಿದ್ದು, ಇದು ಕಿಡಿಗೇಡಿಗಳ ಕೃತ್ಯವಾಗಿರಬಹುದು ಎಂದು ಮಾಲೀಕ ಅನುಮಾನಿಸಿದ್ದಾರೆ.

ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳರಿಮಾಡು ಗ್ರಾಮದ ನಿವಾಸಿ ದೀಕ್ಷಿತ್ ಪಿಂಟೋ ಎಂಬವರು ತಮ್ಮ ಕೆರೆಯಲ್ಲಿ ಸಾಕಿದ್ದ ಮೀನುಗಳು ಅಸಹಜವಾಗಿ ಸಾವನ್ನಪ್ಪಿದೆ. ಸುಮಾರು ೨೫ ವರ್ಷಗಳಿಂದ ಕೆರೆಯಲ್ಲಿ ಮೀನು ಸಾಕಾಣಿಕೆ ನಡೆಸುತ್ತ ಬಂದಿದ್ದೇವೆ. ಕೆÀರೆಯಲ್ಲಿ ವಿವಿಧ ಜಾತಿಯ ಮೀನು ಮರಿಗಳನ್ನು ಸಾಕುತ್ತಿದ್ದೆವು. ಪೊನ್ನಂಪೇಟೆ ಮೀನುಗಾರಿಕಾ ಇಲಾಖೆಯಿಂದ ಮತ್ತು ಮೈಸೂರು ಕೆ.ಅರ್.ಎಸ್ ಹಾಗೂ ಇನ್ನಿತರ ಸ್ಥಳಗಳಿಂದ ವಿವಿಧ ತಳಿಯ ಮೀನುಮರಿಗಳನ್ನು ಖರೀದಿಸಿ ಕೆರೆಯಲ್ಲಿ ಬಿಟ್ಟಿದ್ದೆವು. ೨೦೨೨ ರಲ್ಲಿ ಪೊನ್ನಂಪೇಟೆ ಮೀನುಗಾರಿಕೆ ಇಲಾಖೆಯಿಂದ ಸುಮಾರು ೫,೦೦೦ ಮೀನುಮರಿಗಳನ್ನು ಖರೀದಿಸಿ ಕೆರೆಯಲ್ಲಿ ಸಾಕುತ್ತಿದ್ದೆ. ಕಾಟ್ಲ, ರೋ, ಮತ್ತು ಗ್ರಾಸ್ ಕ್ರಾಫ್ ತಳಿಯ ಮೀನುಮರಿಗಳು ಮುಕ್ಕಾಲು ಕೆ.ಜಿ ಯಿಂದ ಒಂದೂವರೆ ಕೆ.ಜಿಯ ವರೆಗೆ ದಷ್ಟಪುಷ್ಟವಾಗಿ ಬೆಳೆದು ಮಾರಾಟಕ್ಕೆ ಸಿದ್ಧವಾಗಿದ್ದವು. ತಾ. ೪ ರಂದು ಬೆಳಿಗ್ಗೆ ೧೧ ಗಂಟೆ ವೇಳೆಗೆ ಸುಮಾರು ೧೦ ಮೀನುಗಳು ಕೆರೆಯ ದಡದಲ್ಲಿ ತೇಲುತ್ತಿರುವುದು ಗೋಚರಿಸಿದೆ. ಎರಡು ದಿನದ ಬಳಿಕ ಕೆರೆಯ ಎಲ್ಲಾ ಭಾಗದಲ್ಲಿ ಮೀನುಗಳು ತೇಲಲು ಆರಂಭಿಸಿವೆ. ಸುಮಾರು ೨ ರಿಂದ ೩ ಸಾವಿರ ಮೀನುಗಳು ಕೆರೆಯಲ್ಲಿ ತೇಲುತ್ತ ದಡ ಸೇರಿವೆೆ ಎಂದು ಘಟನೆಯನ್ನು ಮಾಲೀಕ ದೀಕ್ಷಿತ್ ನೋವಿನಿಂದ ವಿವರಿಸಿದರು.

ಕಾಫಿ, ಕಾಳುಮೆಣಸು ಮತ್ತು ಇನ್ನಿತರ ಬೆಳೆಗಳಿಂದ ವಾರ್ಷಿಕ ಆದಾಯವಿದ್ದರೂ ಮೀನು ಸಾಕಾಣೆ ಪರ್ಯಾಯ ಆದಾಯವಾಗಿತ್ತು. ಕಿಡಿಗೇಡಿಗಳು ಕೆರೆಗೆ ವಿಷ ಹಾಕಿರುವ ಅನುಮಾನವಿದೆ ಎಂದು ಆರೋಪಿಸಿರುವ ದೀಕ್ಷಿತ್ ಘಟನೆಯಿಂದ ಸುಮಾರು ರೂ. ೧.೫೦ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಇಲಾಖೆ ಮತ್ತು ಸರ್ಕಾರ ಇದನ್ನು ಮನಗಂಡು ಪರಿಹಾರ ನೀಡಿದ್ದಲ್ಲಿ ಬ್ಯಾಂಕ್‌ನಿAದ ಪಡೆದ ಸಾಲವನ್ನು ಮರುಪಾವತಿ ಮಾಡಲು ಅನುಕೂಲವಾಗುತ್ತದೆ ಎಂದು ಮಾಲೀಕ ದೀಕ್ಷಿತ್ ಮನವಿ ಮಾಡಿದ್ದಾರೆ. -ಕಿಶೋರ್ ಕುಮಾರ್ ಶೆಟ್ಟಿ