ಧಾಕಾ, ಆ. ೫: ಸರಕಾರಿ ನೌಕರಿಗೆ, ಸ್ವಾತಂತ್ರ್ಯ ಹೋರಾಟಗಾರರ ಸಂಬAಧಿಕರಿಗೆ ಶೇ.೩೦ ರಷ್ಟು ಮೀಸಲಾತಿ ನೀಡಿದ ಸಂಬAಧ ಬಾಂಗ್ಲಾದೇಶದ ಸರಕಾರ ಹೊರಡಿಸಿದ ಆದೇಶವನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ತೀವ್ರತರಹದ ಪ್ರತಿಭಟನೆ ನಡುವೆ ಪ್ರಧಾನಿ ಶೇಖ್ ಹಸೀನಾ ಅವರು ರಾಜಿನಾಮೆ ನೀಡಿ ಪಲಾಯನ ಮಾಡಿದ್ದಾರೆ. ಸೇವಾ ಹೆಲಿಕಾಪ್ಟರ್ನಲ್ಲಿ ದೇಶ ತೊರೆದ ಅವರು ಇದೀಗ ಭಾರತದ ಆಶ್ರಯ ಪಡೆದಿದ್ದಾರೆ.
ತಾ.೫ ರಂದು ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಶೇಖ್ ಹಸೀನ ಹಾಗೂ ಅವರ ಸಹೋದರಿ ರೆಹಾನ ಅವರುಗಳು ಭಾರತದ ತ್ರಿಪುರ ರಾಜ್ಯದ ಅಗರ್ತಲದಲ್ಲಿ ಬಂದಿಳಿದಿದ್ದು, ಇದೀಗ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಕರ್ ಉಸ್ ಜಮಾನ್ ಅವರು, ಪ್ರಧಾನಿ ಹಸೀನ ಅವರು ರಾಜಿನಾಮೆ ನೀಡಿರುವುದನ್ನು ಖಚಿತಪಡಿಸಿದ್ದು, ರಾಷ್ಟçಪತಿ ಮಹಮದ್ ಶಬಾಬುದ್ದಿನ್ ಅವರೊಂದಿಗೆ ಚರ್ಚಿಸಿ ಹೊಸ ತಾತ್ಕಾಲಿಕ ಸರಕಾರ ಶೀಘ್ರದಲ್ಲಿಯೇ ರಚನೆ ಮಾಡುವುದಾಗಿ ಅಲ್ಲಿನ ತಿಳಿಸಿದ್ದಾರೆ.
ಕಳೆದ ತಿಂಗಳು ಮೀಸಲಾತಿ ಸಂಬAಧ ಆದೇಶ ಹೊರಬಿದ್ದ ಬೆನ್ನಲ್ಲೇ ಜುಲೈ ೧೯ ರಂದು ದೇಶಾದ್ಯಂತ ರಸ್ತೆಗಿಳಿದ ಪ್ರತಿಭಟನಾಕಾರರು ಉಗ್ರ ರೀತಿಯ ಹೋರಾಟ ನಡೆಸಿದ್ದರು. ಕಲಹದಲ್ಲಿ ಸುಮಾರು ೧೦೦ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ನಡುವೆ ಮೀಸಲಾತಿ ಪ್ರಮಾಣವನ್ನು ಸರ್ವೋಚ್ಛ ನ್ಯಾಯಾಲಯವು ಶೇ.೫ಕ್ಕೆ ಇಳಿಸಿದ ಬಳಿಕ ಪ್ರತಿಭಟನಾಕಾರರು ಹೋರಾಟ ನಿಲ್ಲಿಸಿದ್ದರು. ಆದಾಗ್ಯೂ ಜುಲೈ ೧೯ ರಂದು ನಡೆದ ಪ್ರತಿಭಟನೆ ಸಂದರ್ಭ ಅಲ್ಲಿನ ಸರಕಾರವು ಪೊಲೀಸ್ ಹಾಗೂ ಸೇನೆ ಬಳಸಿ ಪ್ರತಿಭಟನಾಕಾರರನ್ನು ತಡೆಯಲು ಹಿಂಸಾತ್ಮಕ ಮಾರ್ಗ ಬಳಸಿ ಸಾವು-ನೋವಿಗೆ ಕಾರಣವಾಯಿತೆಂದು ಆರೋಪಿಸಿ ಹಾಗೂ ಹಸೀನ ಅವರ ರಾಜಿನಾಮೆಗೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರೆಸಿದರು. ತಾ.೪ ರಂದು ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ಮತ್ತೆ ೧೦೦ ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು. ಪ್ರಧಾನಿ ಪರ ನಿಂತವರು ಹಾಗೂ ಅವರ ವಿರೋಧಿ ಸಂಘಟನೆಗಳ ನಡುವೆ ರಸ್ತೆಗಳಲ್ಲಿ ಕಲಹ, ಕಲ್ಲು ತೂರಾಟ, ಗುಂಡೇಟು ಕೂಡ ಸಂಭವಿಸಿದ್ದು ೧೪ ಮಂದಿ ಪೊಲೀಸರೂ ಕೂಡ ಪ್ರಾಣ ಕಳೆದುಕೊಂಡರು. ೨ ಪ್ರತಿಭಟನೆಗಳೂ ಸೇರಿ ಒಟ್ಟು ೩೦೦ ಮಂದಿಯಾದರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ಮಾಹಿತಿ ಇತ್ತಿದ್ದಾರೆ. ತಾ. ೫ರ ಮುಂಜಾನೆ ಸಹಸ್ರಾರು ಮಂದಿ ಪ್ರತಿಭಟನಾಕಾರರು ಬಾಂಗ್ಲಾ ರಾಜಧಾನಿ ಡಾಕಾ ಪ್ರವೇಶಿಸಿ ಪ್ರಧಾನಿಯವರ ನಿವಾಸಕ್ಕೆ ಲಗ್ಗೆ ಇಟ್ಟರಲ್ಲದೆ ಪ್ರಧಾನಿಯವರ ಮನೆಯನ್ನು ಪ್ರವೇಶಿಸಿ ಅದನ್ನು ವಶಪಡಿಸಿಕೊಂಡರು.
ದೇಶದ ಬಿಕ್ಕಟ್ಟು ಬಿಗಡಾಯಿಸುತ್ತಿದ್ದಂತೆ ಆ ದೇಶದ ಸೇನೆ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಪ್ರಧಾನಿಯ ರಾಜೀನಾಮೆಗೆ ಆಗ್ರಹಿಸಿತು. ಅಲ್ಲದೆ ಅವರನ್ನು ಸುರಕ್ಷಿತವಾಗಿ ದೇಶ ತೊರೆಯುವಂತೆ ವ್ಯವಸ್ಥೆ ಮಾಡಿತು. ಭಾರತದ ಅಜ್ಞಾತÀ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವ ಶೇಖ್ ಹಸೀನಾ ಅವರು ಲಂಡನ್ಗೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶೇಖ್ ಹಸೀನಾ ಅವರಿಗೆ ಭಾರತ ಆಶ್ರಯ ಕೊಟ್ಟಿದ್ದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಭಾರತೀಯ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ನೆಲೆಸಿರುವ ಭಾರತೀಯರು ಮನೆ ಬಿಟ್ಟು ಹೊರಬಾರದಂತೆ ಸೇನೆ ಆದೇಶಿಸಿದೆ. ಇದೇ ಸಂದರ್ಭ ಹಸೀನಾ ಅವರ ಸರ್ಕಾರದಲ್ಲಿದ್ದ ಹೆಚ್ಚಿನ ಸಚಿವರು ದೇಶ ತೊರೆದು ಸಿಂಗಾಪುರ, ಯೂರೋಪ್ ದೇಶಗಳತ್ತ ತೆರಳಿದ್ದಾರೆ, ಹಸೀನಾ ಅವರು ಲಂಡನ್ ತೆರಳಲು ಆಸಕ್ತಿ ತೋರಿದ್ದರೆ ಅವರ ಬಂಧುಗಳು ಇತರ ದೇಶಗಳಿಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ.