ಕಳೆದ ಒಂದು ವಾರದ ಹಿಂದೆ ವೀರಾಜಪೇಟೆಯಲ್ಲಿ ನಡೆದ ದುರ್ಘಟನೆ ವೀರಾಜಪೇಟೆಯ ಎರಡನೇ ಪೆರಂಬಾಡಿ (ಬಾಳುಗೋಡು) ನಿವಾಸಿ ಮಧು ಅವರ ಪುತ್ರ ಚಂದನ್ (೨೩)ಎಂಬ ಯುವಕನ ದಾರುಣ ಸಾವಿನ ಬಗ್ಗೆ ಮಾಹಿತಿ.
ಈ ಯುವಕ ಪ್ರತಿದಿನವೂ ಬೆಳಿಗ್ಗೆ ಒಂಭತ್ತು ಗಂಟೆಗೆ ಮನೆಯಿಂದ ತನ್ನ ಸಂಸ್ಥೆಯ (ಬಜಾಜ್ ಫೈನಾನ್ಸ್) ನಲ್ಲಿ ಕೆಲಸದ ನಿಮಿತ್ತ ಹೊರಡುತ್ತಿದ್ದ. ರಾತ್ರಿ ಹತ್ತರಿಂದ ಹನ್ನೊಂದು ಗಂಟೆಯ ಒಳಗೆ ಮನೆಗೆ ಬರುತ್ತಿದ್ದ ಎಂದು ಮನೆಯವರು ಹೇಳುತ್ತಾರೆ. ಆದರೆ ಕಳೆದ ತಿಂಗಳ ೨೯ರ ರಾತ್ರಿ ತಮ್ಮ ಮಗ ಮನೆಗೆ ಬಂದಿರಲಿಲ್ಲ. ಅವನ ದ್ವಿಚಕ್ರ ವಾಹನ ಮಾತ್ರ ವೀರಾಜಪೇಟೆಯಿಂದ ಕೇರಳ ರಾಜ್ಯದ ಹೆದ್ದಾರಿ ಬಳಿಯ ಆರ್ಜಿ ಗ್ರಾಮದ ಮುಖ್ಯ ರಸ್ತೆಯ ಒಂದು ಭಾಗದಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ಸಿಗುತ್ತದೆ.
೨೯ ರಂದು ರಾತ್ರಿ ಹೆಚ್ಚು ಮಳೆ ಬಂದು ವಿದ್ಯುತ್ ಪೂರೈಕೆ ಇರಲಿಲ್ಲ. ವೀರಾಜಪೇಟೆಯ ಪೆರಂಬಾಡಿ ಚೆಕ್ಪೋಸ್ಟ್ನಲ್ಲಿ ರಾತ್ರಿ ಪಾಳಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೀರಾಜಪೇಟೆ ನಗರ ಠಾಣೆ ಪೊಲೀಸರಾದ ಕುಮಾರ್ ಮತ್ತು ಅಂತೋಣಿ ಅವರಿಗೆ ರಾತ್ರಿ ಸುಮಾರು ಹನ್ನೊಂದು ಮೂವತ್ತರ ಸಮಯದಲ್ಲಿ ಚೆಕ್ಪೋಸ್ಟ್ನ ಮುಂದಿನ ತಿರುವು ಬಳಿ ರಸ್ತೆಯ ಹೊಂಡದ ಬಳಿ ದಪ್ಪನೆ ಒಂದು ವಸ್ತು ಬಿದ್ದ ಹಾಗೆ ಗೋಚರಿಸುತ್ತದೆ. ತಕ್ಷಣ ಪೋಲಿಸರು ಕಗ್ಗತ್ತಲೆಯಲ್ಲಿ ತಮ್ಮ ಟಾರ್ಚ್ ಬೆಳಕನ್ನು ಆ ವಸ್ತುವಿನ ಮೇಲೆ ಬಿಡುತ್ತಾರೆ. ಅವರಿಗೆ ಒಂದು ಪುರುಷನ ದೇಹ ಕಾಣುತ್ತದೆ. ಆ ದೇಹದ ಶೇಕಡ ಅರವತ್ತು ಭಾಗ ರಸ್ತೆಯಲ್ಲಿ ಉಜ್ಜಿಹೋಗಿರುತ್ತದೆ.
ಪೊಲೀಸರು ತಕ್ಷಣ ೧೧೨ಗೆ ಕರೆ ಮಾಡುತ್ತಾರೆ. ಅಲ್ಲಿಗೆ ಪೊಲೀಸ್ ಜೀಪ್ ಆಗಮನವಾಗುತ್ತದೆ. ಇತ್ತ ನಗರ ಠಾಣೆಯ ಪೊಲೀಸ್ ಜೀಪ್ ಕೂಡ ಚೆಕ್ ಪೋಸ್ಟ್ ಬಳಿ ಬರುತ್ತದೆ, ಪೊಲೀಸರು ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ವ್ಯಕ್ತಿಯು ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ನಗರ ಠಾಣೆಯ ಜೀಪ್ ಬರುವ ದಾರಿಯಲ್ಲಿ ಅಂದರೆ ಪೊಲೀಸ್ ಠಾಣೆ ಯಿಂದ ಒಂದು ಕಿಮೀ ದೂರದಲ್ಲಿ ಒಂದು ಸ್ಕೂಟಿ ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅ ಮೃತದೇಹವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಾರೆ.
ನಂತರ ರಾತ್ರಿ ಚೆಕ್ ಪೋಸ್ಟ್ ನ ಮೂಲಕ ತೆರಳಿದ ವಾಹನಗಳ ಪರಿಶೀಲನೆ ನಡೆಸಿದ ನಗರ ಠಾಣೆ ಪಿಎಸ್ಐ ರವೀಂದ್ರ ಮತ್ತು ಪೊಲೀಸರಾದ ಮೋಹನ್, ಧರ್ಮ, ಹಾಗೂ ಇತರರ ತಂಡ ಮಾಹಿತಿ ಕಲೆ ಹಾಕಿ ಅ ರಸ್ತೆಯಲ್ಲಿ ಅರ್ಧ ಗಂಟೆಗೆ ಮುಂಚಿತವಾಗಿ ಒಂದು ಕಾರು ಮಾತ್ರ ತೆರಳಿರುವ ಬಗ್ಗೆ ಮಾಹಿತಿ ಸಿಗುತ್ತದೆ. ತಕ್ಷಣ ಪೋಲಿಸರು ರಾತ್ರಿಯಲ್ಲಿ ದಟ್ಟವಾದ ಅರಣ್ಯದ ರಸ್ತೆಯಲ್ಲಿ ಸಾಗಿ ಬಂದು ಅ ರಸ್ತೆಯಲ್ಲಿ ಹೋಗುತ್ತಿದ್ದ ಕಾರನ್ನು ತಪಾಸಣೆ ಮಾಡುತ್ತಾರೆ. ಆ ಕಾರಿನಲ್ಲಿ ವೀರಾಜಪೇಟೆ ಚಿಕ್ಕಪೇಟೆಯ ಒಂದು ಕುಟುಂಬದ ಸದಸ್ಯರು ಇರುತ್ತಾರೆ.
ಆ ಕಾರು ವೀರಾಜಪೇಟೆಯಿಂದ ತಮ್ಮ ಪುತ್ರಿಯ ಉನ್ನತ ಶಿಕ್ಷಣದ ಸಲುವಾಗಿ ವಿದೇಶಕ್ಕೆ ತೆರಳಲು ಕೂತುಬರಂಬು (ಕೇರಳ ಅಂತರರಾಷ್ಟಿçÃಯ ವಿಮಾನ ನಿಲ್ದಾಣ) ಕ್ಕೆ ತೆರಳಿ ಮಗಳನ್ನು ಬಿಟ್ಟು ಬರಲು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವೀರಾಜಪೇಟೆ ನಗರ ಪೊಲೀಸರು ಅವರ ಕಾರಿಗೆ ಅಪಘಾತ ನಡೆದ ಬಗ್ಗೆ ಮಾಹಿತಿ ನೀಡಿದರು, ಹರೀಶ್ ಎಂಬ ಚಾಲಕ ಕಾರನ್ನು ಚಲಾವಣೆ ಮಾಡುತ್ತಿದ್ದರೂ ಅವರಿಗೆ ಅಪಘಾತದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ನಂತರ ಪೊಲೀಸರು ಉನ್ನತ ಶಿಕ್ಷಣ ಪಡೆಯಲು ತೆರಳುತ್ತಿರುವ ವಿದ್ಯಾರ್ಥಿಗೆ ಅತ್ತ ಕೇರಳ ರಾಜ್ಯದಿಂದ ಟ್ಯಾಕ್ಸಿ ವಾಹನ ತರಿಸಿ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಕೊಡುತ್ತಾರೆ. ಕಾರನ್ನು ತಮ್ಮ ವಶಕ್ಕೆ ಪಡೆದುಕೊಂಡು ನಗರ ಠಾಣೆಗೆ ತರಿಸಿಕೊಂಡು ಅಪಘಾತದ ಶೋಧನೆ ಆರಂಭ ಮಾಡುತ್ತಾರೆ. ರಾತ್ರಿ ಎರಡು ಗಂಟೆಯ ಸಮಯದಲ್ಲಿ ಆಸ್ಪತ್ರೆಗೆ ಆಗಮಿಸಿದ ಪೊಲೀಸರ ತಂಡ ಮೃತಪಟ್ಟ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಾರೆ. ಅವರಿಗೆ ಆರ್ಜಿ ಸೇತುವೆ ಬಳಿ ಮುಖ್ಯ ರಸ್ತೆಯ ನೀರಿನಲ್ಲಿ ದೊರೆತ ಸ್ಕೂಟಿಗೂ ಈ ಅಪಘಾತಕ್ಕೂ ತಾಳೆ ಹಾಕಿದ ಪೊಲೀಸರಿಗೆ ಅವರ ಲೆಕ್ಕಾಚಾರ ಸರಿ ಹೋಗುತ್ತದೆ.
ಆದರೆ ಸ್ಕೂಟಿ ಬಿದ್ದ ಸ್ಥಳದಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿ ಚೆಕ್ಪೋಸ್ಟ್ ಇರುವುದು ಅಷ್ಟು ದೂರ ಹೋಗಲು ಹೇಗೆ ಸಾಧ್ಯ ಎಂದು ನೋಡಿದಾಗ ಚಂದನ್ ಧರಿಸಿದ್ದ ಜರ್ಕಿನ್ನ ದಾರಗಳು ಮತ್ತು ಬ್ಯಾಗ್ ಕಾರಿನ ಅಡಿ ಭಾಗಕ್ಕೆ ಸಿಕ್ಕಿ ಹಾಕಿಕೊಂಡು ನಾಲ್ಕು ಕಿಮೀ ವರೆಗೆ ಚಂದನ್ ನನ್ನು ಎಳೆದುಕೊಂಡು ಹೋಗಿರುತ್ತದೆ. ಮಳೆ ಜಾಸ್ತಿ ಇದ್ದ ಕಾರಣ ಕಾರಿನ ಎಲ್ಲಾ ಡೋರ್ಗಳು ಮುಚ್ಚಿ ಕಾರಿನಲ್ಲಿ ಹಾಡುಗಳನ್ನು ಕೇಳುತ್ತಾ ಸಾಗಿದ್ದರಿಂದ ಯಾವುದೇ ಶಬ್ದ ಕೇಳಿಲ್ಲ. ಆರ್ಜಿ ಗ್ರಾಮದ ಸೇತುವೆಯ ಬಳಿ ಪ್ರತಿವರ್ಷವೂ ಕೂಡ ಮಳೆಗಾಲದಲ್ಲಿ ರಸ್ತೆಯ ಎರಡು ಬದಿಯ ಗದ್ದೆ ಯಲ್ಲಿ ಮಳೆ ನೀರು ಬಂದು ಮುಖ್ಯ ರಸ್ತೆ ನೀರಿನಿಂದ ಮುಚ್ಚಿ ಹೋಗುತ್ತದೆ.
ಆ ರಸ್ತೆಯಲ್ಲಿ ಅಂದು ಮುಖ್ಯ ರಸ್ತೆಯ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ನಿಂತಿತ್ತು ಎಂದು ಆ ರಸ್ತೆಯಲ್ಲಿ ಸಾಗಿದ ಅನೇಕರು ಮಾಹಿತಿ ನೀಡಿದರು. ಚಂದನ್ ರಾತ್ರಿ ತನ್ನ ದ್ವಿಚಕ್ರ ವಾಹನ ದಲ್ಲಿ ಮಳೆಯ ನೀರನ್ನು ಲೆಕ್ಕಿಸದೆ ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಮುಖ್ಯ ರಸ್ತೆಯಲ್ಲಿ ಬಿದ್ದು ಹೋಗಿದ್ದಾನೆ. ಅದೇ ಮಾರ್ಗ ದಲ್ಲಿ ಮಳೆ ನೀರು ಜಾಸ್ತಿ ಇದ್ದ ಕಾರಣ ಕಾರು ಕೂಡ ತನ್ನ ವೇಗವನ್ನು ಜಾಸ್ತಿ ಮಾಡಿದ ಕಾರಣ ರಸ್ತೆಯಲ್ಲಿ ಬಿದ್ದಿದ್ದ ಚಂದನ್ ಹಾಗೂ ಅವನು ಹಾಕಿಕೊಂಡಿದ್ದ ಬ್ಯಾಗ್ ಕಾರಿನ ಹಿಂಭಾಗದ ಬಂಪರ್ಗೆ ಸಿಲುಕಿಕೊಳ್ಳುತ್ತದೆ.
ಮಳೆ, ಗಾಳಿ, ಮಿಂಚು, ಗುಡುಗಿನ ಶಬ್ದಕ್ಕೆ ಚಂದನ್ ಕೂಗು ಕಾರಿನಲ್ಲಿದ್ದ ಯಾರಿಗೂ ಕೇಳಿಸದೆ ಹೋಗುತ್ತದೆ. ಘಟನಾ ಸ್ಥಳದಿಂದ ಸುಮಾರು ನಾಲ್ಕು ಕಿಮೀ ಚಂದನ್ ನನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಕಾರು ಚೆಕ್ ಪೋಸ್ಟ್ ಬಳಿಯ ರಸ್ತೆಯ ಗುಂಡಿಗೆ ಬೀಳುತ್ತದೆ. ಕಾರಿನಲ್ಲಿ ಇದ್ದವರಿಗೆ ಯಾವುದೇ ಮಾಹಿತಿ ಇಲ್ಲದೆ ಮುಂದೆ ಸಾಗಿದ್ದಾರೆ. ರಸ್ತೆಯಲ್ಲಿ ಹೊಂಡ ಇಲ್ಲದೆ ಹೋಗಿದ್ದರೆ ಚಂದನ್ನನ್ನು ಕಾರು ಕೇರಳ ರಾಜ್ಯಕ್ಕೆ ತೆಗೆದುಕೊಂಡು ಹೋಗುವ ಎಲ್ಲಾ ಸಾಧ್ಯತೆ ಇತ್ತು.
ನಂತರ ಚಂದನ್ ರಾತ್ರಿ ಮನೆಗೆ ಬಾರದೇ ಇರುವ ಬಗ್ಗೆ ಮತ್ತು ಅವನ ದ್ವಿಚಕ್ರ ವಾಹನ ಮುಖ್ಯ ರಸ್ತೆಯಲ್ಲಿ ದೊರೆತ ಬಗ್ಗೆ ಹಾಗೂ ರಸ್ತೆಯಲ್ಲಿ ಸಿಕ್ಕಿದ ಮೃತದೇಹವನ್ನು ಪತ್ತೆ ಹಚ್ಚಿದ ಚಂದನ್ ಕುಟುಂಬದ ಸದಸ್ಯರು ೩೦ ರ ಮಂಗಳವಾರ ಬೆಳಿಗ್ಗೆ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಮಲಬಾರ್ ರಸ್ತೆಯ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ. ಪೊಲೀಸರು ಕಾರಿನ ಚಾಲಕ ಹರೀಶನ ವಿರುದ್ಧ ಕ್ರಮಕೈಗೊಳ್ಳುತ್ತಾರೆ. ಕಳೆದ ಕೆಲವು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಕಟ್ಟಿದ ನೂತನ ಸೇತುವೆ ಇದಾಗಿದೆ. ಸೇತುವೆ ನಿರ್ಮಾಣದ ಸಮಯದಲ್ಲೂ ಅನೇಕ ಅಪಘಾತ ನಡೆದಿದೆ. ಇದರ ಮುಂದೆ ಪ್ರತಿವರ್ಷವೂ ಮಳೆಗಾಲದಲ್ಲಿ ಹೆಚ್ಚು ನೀರು ಬಂದು ಸಮಸ್ಯೆ ಉಂಟಾಗುತ್ತದೆ. ವೀರಾಜಪೇಟೆಯ ಬಾಳುಗೋಡು ನಿವಾಸಿ ಮಧು ಅವರ ಪುತ್ರ ದುರಂತದಲ್ಲಿ ಅಂತ್ಯಗೊAಡಿದ್ದು, ಮಾತ್ರ ವಿಪರ್ಯಾಸವೆ ಸರಿ.
-ರವಿಕುಮಾರ್ ಎಂ., ವೀರಾಜಪೇಟೆ