ಮಡಿಕೇರಿ, ಆ.೫: ಮೋರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಯುವಕರಿಬ್ಬರು ಸಾವನ್ನಪ್ಪಿದ ಘಟನೆ ಸಂಪಾಜೆ ಬಳಿಯ ಕೊಯನಾಡಿನಲ್ಲಿ ನಡೆದಿದೆ.
ತಾ.೪ರ ರಾತ್ರಿ ಘಟನೆ ಸಂಭವಿಸಿದ್ದು, ಮೈಸೂರು ಮೂಲದ ಪವನ್ ಮತ್ತು ಮನೋಜ್ ಮೃತ ದುರ್ದೈವಿಗಳು.
ಮೈಸೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಬೈಕ್ ಕೊಯನಾಡಿನ ಅರಣ್ಯ ಇಲಾಖೆ ಕಚೇರಿ ಬಳಿಯ ಮೋರಿಗೆ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಪಕ್ಕದ ಚರಂಡಿಗೆ ಬೈಕ್ ಸಹಿತ ಬಿದ್ದಿದ್ದು, ರಾತ್ರಿಯಾಗಿದ್ದ ಕಾರಣ ಅಪಘಾತವಾದ ವಿಚಾರ ಯಾರಿಗೂ ತಿಳಿದು ಬಂದಿರಲಿಲ್ಲ. ಸೋಮವಾರ ಬೆಳಿಗ್ಗೆ ಸಂಚಾರಿಗಳಿಗೆ ವಿಷಯ ತಿಳಿದು ಬಂದಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಸಂಪಾಜೆ ಪೊಲೀಸ್ ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.