ಶನಿವಾರಸಂತೆ, ಜು.೨೧ : ಬಸ್ ಮತ್ತು ಕಾರು ಮುಖಾಮುಖಿಯಾಗಿ ಸಂಭವಿಸಬಹುದಾದ ಅಪಘಾತ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಸಮೀಪದ ಬೀಟಿಕಟ್ಟೆ ತಿರುವಿನಲ್ಲಿ ಭಾನುವಾರ ನಡೆದಿದೆ.

ಶನಿವಾರಸಂತೆಯಿAದ ಸೋಮವಾರಪೇಟೆ ಕಡೆ ಹೋಗುತ್ತಿದ್ದ ಸರ್ಕಾರಿ ಬಸ್ ಹಾಗೂ ಸೋಮವಾರಪೇಟೆಯಿಂದ ಶನಿವಾರಸಂತೆ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದ ಕಾರಿನ ನಡುವೆ ನಡೆಯಲಿರುವ ಅಪಘಾತದ ಸುಳಿವು ಅರಿತ ಬಸ್ ಚಾಲಕ ತಕ್ಷಣ ಬಸ್ ಅನ್ನು ರಸ್ತೆ ಬದಿಗೆ ಇಳಿಸಿದ ಹಿನ್ನೆಲೆ ಕಾರು ಅಪಘಾತಕ್ಕೀಡಾಗುವುದು ತಪ್ಪಿತು ಎಂದು ಪ್ರತ್ಯಕ್ಷದರ್ಶಿ ಗ್ರಾಮಸ್ಥರು ತಿಳಿಸಿರುತ್ತಾರೆ. ಬಸ್ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿರುತ್ತಾರೆ.

ಆದರೆ, ರಸ್ತೆ ಬದಿಗೆ ಇಳಿಸಿದ ಬಸ್‌ನ ಚಕ್ರ ಕೆಸರು ಮಣ್ಣಿನಲ್ಲಿ ಸಿಲುಕಿಕೊಂಡು ಮುಂದಕ್ಕೆ ಚಲಿಸಲು ಸಾಧ್ಯವಾಗಲಿಲ್ಲ. ಗ್ರಾಮಸ್ಥರು ತಕ್ಷಣ ಮೂರು ಟ್ರಾö್ಯಕರ್‌ಗಳನ್ನು ತರಿಸಿ ಬಸ್‌ಅನ್ನು ರಸ್ತೆಗೆ ಎಳೆದು ತರುವಲ್ಲಿ ಯಶಸ್ವಿಯಾದರು.