ಒಂದು ವಾರದಿಂದ ಕಾರ್ಗತ್ತಲಲ್ಲಿ ಚೇಲಾವರ ಗ್ರಾಮ

ಚೆಯ್ಯಂಡಾಣೆ, ಜು, ೨೧: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಚೇಲಾವರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸೌಲಭ್ಯ ಇಲ್ಲದೆ ಗ್ರಾಮಸ್ಥರು ಕಾರ್ಗತ್ತಲಲ್ಲಿ ಜೀವನ ನಡೆಸುವ ಪರಿಸ್ಥಿತಿ ಬಂದೊದಗಿದೆ.

ಕೊಡಗಿನ ಅತ್ಯಂತ ಸುಂದರ ಪ್ರವಾಸಿ ತಾಣವಾದ ಚೇಲಾವರ ಜಲಪಾತ, ಕಬ್ಬೆಬೆಟ್ಟ, ಚೋಮಕುಂದ್ ಕೂಡ ಇರುವ ಈ ಜಾಗದಲ್ಲಿ ಏರ್ಪಟ್ಟಿರುವ ವಿದ್ಯುತ್ ಸಮಸ್ಯೆ ಭಯ ಸೃಷ್ಟಿಸುತ್ತಿದೆ.

ವಿದ್ಯುತ್ ಸಮಸ್ಯೆಯ ಬಗ್ಗೆ ಮೂರ್ನಾಡು ಕಿರಿಯ ಅಭಿಯಂತರರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತಿಲ್ಲ, ನಿರ್ಲಕ್ಷö್ಯ ತೋರುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

ಒಂದೆಡೆ ಕಾಡಾನೆ ಸಮಸ್ಯೆ ಮತ್ತೊಂದೆಡೆ ವಿದ್ಯುತ್ ಸಮಸ್ಯೆ. ಇರುವ ಲೈನ್‌ಮ್ಯಾನ್ ಗ್ರಾಮಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ವಿದ್ಯುತ್ ಇಲ್ಲದೆ ನೆಟ್‌ವರ್ಕ್ ಸಮಸ್ಯೆ, ಮೊಬೈಲ್ ಚಾರ್ಜಿಂಗ್‌ಗೆ ಸಮಸ್ಯೆಯಾಗಿದೆ.

ಸಂಬAಧಪಟ್ಟ ಚೆಸ್ಕಾಂ ಇಲಾಖೆ ಕೂಡಲೇ ವಿದ್ಯುತ್ ಸಮಸ್ಯೆ ಸರಿಪಡಿಸಬೇಕೆಂದು ಗ್ರಾಮಸ್ಥರು ಕೋರಿದ್ದಾರೆ. ಖುದ್ದು ಗ್ರಾಮಸ್ಥರು ಲೈನ್ ದುರಸ್ತಿಪಡಿಸಲು ಮುಂದಾದರು.

ಗ್ರಾಮದ ಜನರು ಸೇರಿ ಹಾರೆ, ಪಿಕಾಸಿ, ಗುದ್ದಲಿ ಹಿಡಿದು ಗುಂಡಿ ತೋಡಿ ನೂತನ ಕಂಬ ಅಳವಡಿಸಿದರು. ತೋಟದೊಳಗೆ ಕಂಬವನ್ನು ಪಿಕ್‌ಅಪ್ ಜೀಪ್ ಮೂಲಕ ಎಳೆದು ಕೊಂಡೊಯ್ದು ವಾಹನ ಹೋಗದ ರಸ್ತೆಯಲ್ಲಿ ಕಂಬವನ್ನೆಳೆದು ಗ್ರಾಮಸ್ಥರು ತೋಟದೊಳಗೆ ಹಾನಿಯಾದ ಕಂಬವನ್ನು ಸರಿಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಸೆಸ್ಕ್ ಅಧಿಕಾರಿಗಳು ಗ್ರಾಮಸ್ಥರು ಇಲಾಖೆಯಿಂದ ಸಮ್ಮತಿ ಪಡೆಯದೆ ವಿದ್ಯುತ್ ಕಂಬ ನಿಲ್ಲಿಸಿದ್ದಾರೆ. ಒಂದೆರಡು ದಿನ ತಡವಾದರೂ ಇಲಾಖೆಯ ಸಿಬ್ಬಂದಿ ಮಾತ್ರ ಈ ಕೆಲಸ ನಿರ್ವಹಿಸುತ್ತಾರೆ. ಅನೇಕ ಸಿಬ್ಬಂದಿ ರಜೆ ಹಾಕಿದ್ದು, ಇನ್ನು ಕೆಲವು ಕಡೆ ತುರ್ತು ಕೆಲಸದಲ್ಲಿ ಕೆಲವರು ತೊಡಗಿಸಿಕೊಂಡಿದ್ದಾರೆ. ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುತ್ತೇವೆ ಎಂದು ‘ಶಕ್ತಿ’ಯೊಂದಿಗೆ ಭರವಸೆ ನೀಡಿದ್ದಾರೆ.

-ಅಶ್ರಫ್