ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು ಜು. ೨೧: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವ ಮಸೂದೆಯನ್ನು ವಿವಾದದ ನಂತರ ಸರ್ಕಾರ ಸ್ಥಗಿತಗೊಳಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತೊಂದು ನಿರ್ಧಾರವಾದ ಅಲೆಮಾರಿ ಕುರುಬ ಸಮುದಾಯಕ್ಕೆ ಬಂದೂಕು ಪರವಾನಗಿ ನೀಡಲು ಹೊರಟಿರುವುದು ವಿವಾದವನ್ನು ಹುಟ್ಟುಹಾಕಿದೆ.
ಕುರುಬ ಜನಾಂಗದವರಿಗೆ ಆಯುಧ ನೀಡುವುದರ ಜತೆಗೆ ಕುರಿ ಮೇಯಿಸಲು ಅರಣ್ಯ ಪ್ರದೇಶಗಳಲ್ಲಿ ಅನುಮತಿ ನೀಡುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಆದರೆ ಅವರ ನಿರ್ಧಾರಗಳು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವನ್ಯಜೀವಿ ತಜ್ಞರಿಂದ ಟೀಕೆಗೆ ಒಳಗಾಗಿವೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿ ಬಂದೂಕು ಪರವಾನಗಿ ನೀಡುವಂತೆ ಹಾಗೂ ಅರಣ್ಯಾಧಿಕಾರಿಗಳಿಗೆ ಸೂಚಿಸಿ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಅನುಮತಿಸಬೇಕೆಂದು ಹೇಳಿದ್ದಾರೆ. ಈ ಸೂಚನೆ ಕುರಿತು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅವರು ಸ್ಪಷ್ಟಪಡಿಸಿದರು.
ಕುರುಬರು ಮತ್ತು ಜಾನುವಾರುಗಳನ್ನು ಕಳ್ಳತನದಿಂದ ರಕ್ಷಿಸಲು ಮತ್ತು ಹುಲ್ಲುಗಾವಲಿನ ಕೊರತೆಯನ್ನು ನೀಗಿಸಲು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡರೆ, ಈ ಕ್ರಮಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿಸಿ , ಬೇಟೆಯಾಡುವುದು ಮತ್ತು ರೋಗಗಳನ್ನು ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ.
“ಅಲೆಮಾರಿ ಕುರುಬರಿಗೆ ಬಂದೂಕು ಪರವಾನಗಿ ನೀಡುವುದು ಅವಶ್ಯಕವಾಗಿದೆ. ಕುರಿಗಳ ಕಳ್ಳತನ ತಡೆಯಲು ಇದು ಅಗತ್ಯವಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದರು. ಆದರೆ, ಸರಕಾರ ಆದೇಶ ಹೊರಡಿಸಿಲ್ಲ; ಅಥವಾ ಕಾಡುಗಳ ಒಳಗೆ ಕುರಿ ಮೇಯಿಸುವುದರ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಿಲ್ಲ. ದರೋಡೆಕೋರರಿಂದ ತಮ್ಮ ಜಾನುವಾರುಗಳನ್ನು ರಕ್ಷಿಸಲು ಬಂದೂಕು ಪರವಾನಗಿ ನೀಡುವಂತೆ ಅಲೆಮಾರಿ ಕುರುಬರಿಂದ ಬಹುಕಾಲದ ಬೇಡಿಕೆಗಳು ಬಾಕಿಯಿರುವುದರಿಂದ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಕೆಲವು ಪ್ರದೇಶಗಳಲ್ಲಿ, ಕುರುಬರು ತಮ್ಮ ಜಾನುವಾರುಗಳನ್ನು ಮೇಯಿಸಲು ಸ್ಥಳ ಸಿಗದೆ ಜೀವನಕ್ಕೆ ಭಾರೀ ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ಕಾಡಿನಲ್ಲಿ ಮೇಯಿಸಲು ಅನುಮತಿ ನೀಡಲಾಗಿದೆ’ ಎಂದು ವಿವರಿಸಿದರು. ಸರ್ಕಾರದ ಈ ಸೂಚನೆಗೆ ಬೆಂಗಳೂರಿನ ಪರಿಸರವಾದಿ ಜೋಸೆಫ್ ಹೂವರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಬಂದೂಕು ಪರವಾನಗಿ ನೀಡುವಾಗ ಅದನ್ನು ಬಳಸಲು ಮತ್ತು ಇಟ್ಟುಕೊಳ್ಳಲು ಸೂಕ್ತ ಸ್ಥಳಾವಕಾಶ ಭದ್ರತೆ ಇದೆಯೇ ಎಂದು ಪರಿಶೀಲಿಸಲಾಗುತ್ತದೆ. ಅಲ್ಲದೇ ಭೂಮಿಯ ಮಾಲೀಕತ್ವ ಇಲ್ಲದವರಿಗೆ ನೀಡುವುದಿಲ್ಲ. ಇದೀಗ ಅಲೆಮಾರಿ ಜನಾಂಗದವರಿಗೂ ಬಂದೂಕು ನೀಡುವುದರಿಂದಾಗಿ ಕಾಡಿನಲ್ಲಿ ಅಕ್ರಮ ಬೇಟೆ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಭಯಾರಣ್ಯದ ಪ್ರದೇಶದ ೧೦ ಕಿಮೀ ವ್ಯಾಪ್ತಿಯಲ್ಲಿ ಈಗ ಪರವಾನಗಿ ಹೊಂದಿರುವ ಬಂದೂಕು ಮಾಲೀಕರು ಅರಣ್ಯ ಅಧಿಕಾರಿಗಳ ಬಳಿ ತಮ್ಮ ಬಂದೂಕಿನ ಮಾಹಿತಿ ನೀಡಬೇಕಿದೆ. ಆದರೆ ಅಲೆಮಾರಿ ಜನಾಂಗಕ್ಕೆ ಬಂದೂಕು ನೀಡಿ ಅರಣ್ಯದೊಳಗೆ ಪ್ರವೇಶಿಸಲು ಅನುಮತಿಸುವುದು ಪರಿಸರಕ್ಕೆ ಧಕ್ಕೆಯುಂಟು ಮಾಡಲಿದೆ ಎಂದು ಅವರು ಎಚ್ಚರಿಸಿದರು. ಬೆಂಗಳೂರಿನಲ್ಲಿ ವರ್ಷಕ್ಕೆ ನೂರಾರು ಕೊಲೆ, ದರೋಡೆ , ಹಲ್ಲೆ ಪ್ರಕರಣ ವರದಿ ಆಗುತ್ತದೆ. ಹಾಗಂತ ಆತ್ಮರಕ್ಷಣೆಗೆ ಎಲ್ಲರಿಗೂ ಬಂದೂಕು ನೀಡಲು ಹೊರಟರೆ ಪರಿಸ್ಥಿತಿ ಏನಾಗಬಹುದು ಎಂದು ಅವರು ಪ್ರಶ್ನಿಸಿದರು.