ಮಡಿಕೇರಿ, ಜು. ೨೦: ನಿರಂತರವಾಗಿ ಸುರಿದ ಭಾರೀ ಮಳೆ ಹಾಗೂ ಗಾಳಿಯ ಪರಿಣಾಮದಿಂದ ಹತ್ತು ಹಲವಾರು ಸಂಕಷ್ಟಗಳನ್ನು ಕೊಡಗು ಜಿಲ್ಲೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರು ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ಹಾನಿಯಿಂದಾದ ಹಲವು ಸಮಸ್ಯೆಗಳ ಬಗ್ಗೆ ಶಾಸಕರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಹಿತವಾಗಿ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಸಂತ್ರಸ್ತರೊAದಿಗೂ ಸಮಾಲೋಚನೆ ನಡೆಸಿದರು.
ಸಚಿವ ಬೋಸರಾಜು ಅವರು ಇಂದು ವೀರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಹಾನಿಪೀಡಿತ ಪ್ರದೇಶಗಳಿಗೆ ಕ್ಷೇತ್ರ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರೊಂದಿಗೆ ಭೇಟಿ ನೀಡುವ ಕಾರ್ಯ ಹಮ್ಮಿಕೊಂಡಿದ್ದರು. ತಾ.೨೧ರಂದು (ಇಂದು) ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಮಂತರ್ ಗೌಡ ಸಹಿತವಾಗಿ ಭೇಟಿ ನೀಡಲಿದ್ದಾರೆ. ಇಂದು ಬೆಳಿಗ್ಗೆ ಸಚಿವರು ನೇರವಾಗಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಪ್ರದೇಶಗಳಿಗೆ ಆಗಮಿಸಿದರು.
ಸಿದ್ದಾಪುರ : ಸಿದ್ದಾಪುರಕ್ಕೆ ಆಗಮಿಸಿದ ಉಸ್ತುವಾರಿ ಸಚಿವರು ನೇರವಾಗಿ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊAದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭ ಸಂತ್ರಸ್ತರೊAದಿಗೆ ಶಾಶ್ವತ ಪರಿಹಾರದ ಕುರಿತು ಮಾತನಾಡಿದರು. ಪ್ರವಾಹ ಪ್ರದೇಶದ ನಿವಾಸಿಗಳಿಗೆ ಪರ್ಯಾಯ ಜಾಗ ನೀಡಿದಲ್ಲಿ ನದಿ ತೀರದಿಂದ ಸ್ಥಳಾಂತರವಾಗುತ್ತೀರ ಎಂದು ಸಚಿವರು ಪ್ರಶ್ನಿಸಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ತೆರÀಳುವುದಾಗಿ ಸಂತ್ರಸ್ತರು ಸಮ್ಮತಿಸಿದರು. ಸಚಿವರು ನಂತರ ಪರಿಹಾರ (ಮೊದಲ ಪುಟದಿಂದ) ಕೇಂದ್ರದಲ್ಲಿ ಇರುವ ಆರೋಗ್ಯ ತಪಾಸಣಾ ಕೇಂದ್ರವನ್ನು ಪರಿಶೀಲಿಸಿದರು. ಅಲ್ಲದೆ ಆರೋಗ್ಯ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರು ಜಿಲ್ಲಾಧಿಕಾರಿಗಳ ಮಾರ್ಗದರ್ಶನದ ಮೇಲೆ ಪರಿಹಾರ ಕೇಂದ್ರದಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ನದಿ ತೀರದ ಬಳಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವರಿಗೆ ಮಾಹಿತಿ ತಿಳಿಸಿದರು. ಇದಾದ ನಂತರ ಪ್ರವಾಹ ಪೀಡಿತ ಕರಡಿಗೋಡು ಗ್ರಾಮದ ನದಿ ತೀರಕ್ಕೆ ಸಚಿವ ಬೋಸರಾಜು ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿ ತೀರದ ನಿವಾಸಿಗಳ ಬಳಿ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ಓಮಪ್ಪ ಬಣಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಗೋಪಾಲ್, ಉಪಾಧ್ಯಕ್ಷ ಪಳನಿಸ್ವಾಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಶಾಶ್ವತ ಸೂರಿನ ಭರವಸೆ
ಕರಡಿಗೋಡು ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಉಸ್ತುವಾರಿ ಸಚಿವರಾದ ಬೋಸರಾಜು ಮಾತನಾಡಿ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು ೧೦ ಎಕರೆ ಜಾಗವನ್ನು ಗುರುತಿಸಲಾಗಿದೆ. ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಗುರುತಿಸಿರುವ ಜಾಗದಲ್ಲಿ ಬಡಾವಣೆಯನ್ನು ನಿರ್ಮಿಸಿ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸಿ ಕೊಡಲಾಗುವುದೆಂದು ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿಯಿಂದ ವರದಿಯನ್ನು ಪಡೆದುಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಮುಂದಿನ ವರ್ಷದ ಒಳಗೆ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ನಿವೇಶನವನ್ನು ನೀಡಿ ನದಿ ತೀರದಿಂದ ಸ್ಥಳಾಂತರ ಮಾಡಲಾಗುವುದೆಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಮಳೆಯಿಂದ ಎಷ್ಟು ಹಾನಿಯಾಗಿದೆಯೆಂದು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಅಲ್ಲದೆ ಪುನರ್ವಸತಿ ಕಲ್ಪಿಸಿದ ನಂತರ ಯಾವುದೇ ಕಾರಣಕ್ಕೂ ನದಿ ತೀರದಲ್ಲಿ ಹೊಸ ಮನೆ ಸೇರಿದಂತೆ ಯಾವುದೇ ಕಾಮಗಾರಿಗೆ ಅವಕಾಶ ನೀಡುವುದಿಲ್ಲ. ಬದಲಿಗೆ ನದಿ ತೀರದಿಂದ ಸ್ಥಳಾಂತರ ಮಾಡಿದ ನಂತರ ನದಿ ತೀರದಲ್ಲಿರುವ ಮನೆಗಳನ್ನು ಕೆಡವಲಾಗುವುದು ಎಂದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿ ನದಿ ತೀರದ ನಿವಾಸಿಗಳಿಗೆ ಈಗಾಗಲೇ ಪುನರ್ವಸತಿಗಾಗಿ ಜಾಗ ಗುರುತಿಸಲಾಗಿದ್ದು ಆ ಜಾಗಕ್ಕೆ ಎಲ್ಲರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ನದಿ ತೀರದ ನಿವಾಸಿಗಳಿಗೆ ಸಮಸ್ಯೆಗಳು ಆಗದ ರೀತಿಯಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಿ ಸೂರು ಕಲ್ಪಿಸಲಾಗುವುದೆಂದು ತಿಳಿಸಿದರು. ಪುನರ್ವಸತಿ ಜಾಗದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು. ಇದೇ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರು ಮಾಲ್ತಾರೆ ಬಳಿ ಪುನರ್ವಸತಿಗೆ ಗುರುತಿಸಿದ ಜಾಗದ ದಾಖಲೆಗಳನ್ನು ಉಸ್ತುವಾರಿ ಸಚಿವರಿಗೆ ಹಾಗೂ ಶಾಸಕರಿಗೆ ನೀಡಿದರು.
ವಾಸು ಎ.ಎನ್