ಚೆಯ್ಯಂಡಾಣೆ, ಜು. ೨೦: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಟ್ಟಣ, ನರಿಯಂದಡ, ಕೊಕೇರಿ, ಚೇಲಾವರ, ಕರಡ, ಅರಪಟ್ಟು ಗ್ರಾಮಗಳಲ್ಲಿ ಕಾಡಾನೆ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿದ್ದು, ಜೀವಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನರಿಯಂದಡ ಗ್ರಾಮದ ತೊಟಂಬೈಲು ಕುಟುಂಬಸ್ಥರ ಐನ್ ಮನೆ, ಪೊಕ್ಕುಳಂಡ್ರ, ಮಂಞಪುರ, ಮಕ್ಕಿಮನೆ, ಬೆಳಿಯಂಡ್ರ, ನೆಲ್ಲಮಕ್ಕಡ, ಚಂಡೀರ, ಮಚ್ಚಂಡ, ಬೊವ್ವೇರಿಯಂಡ, ಬಿದ್ದಂಡ ಕುಟುಂಬಸ್ಥರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಬಾಳೆ, ಕಾಫಿ, ತೆಂಗು, ಅಡಿಕೆ, ಒಳ್ಳೆಮೆಣಸು ಗಿಡಗಳನ್ನು ತುಳಿದು ನಾಶಪಡಿಸಿವೆ. ಅದಲ್ಲದೆ ಸ್ಪಿçಂಕ್ಲರ್ ಪೈಪುಗಳನ್ನು ತುಳಿದು ಹಾನಿಪಡಿಸಿವೆ. ತೋಟಗಳನ್ನು ಹಾಳು ಮಾಡಿವೆ.
ಒಂದು ಗುಂಪಿನಲ್ಲಿ ೮ಕ್ಕೂ ಅಧಿಕ ಆನೆಗಳಿದ್ದು ಅದರಲ್ಲಿ ಒಂದು ಆನೆ ಕುಂಟುತ್ತಾ ಸಂಚರಿಸುತ್ತಿದೆ, ಉಳಿದ ಆನೆಗಳು ತೋಟಗಳಿಂದ ತೆರಳುತ್ತಿಲ್ಲ, ಇದರಿಂದ ರೈತರಿಗೆ, ಕಾರ್ಮಿಕರಿಗೆ ತೋಟಕ್ಕೆ ತೆರಳಲು ಭಯದ ವಾತಾವರಣ ಸೃಷ್ಟಿಯಾಗಿದೆ. ಮಳೆ ಕೂಡ ಹೆಚ್ಚಾಗಿದ್ದು ವಿದ್ಯುತ್ ಅಡಚಣೆ ಕೂಡ ಅಧಿಕವಾಗಿದೆ. ಸಂಬAಧಪಟ್ಟ ಅರಣ್ಯ ಇಲಾಖೆ ಎಚ್ಚೆತ್ತು ಕಾಡಾನೆಗಳನ್ನು ಸೆರೆ ಹಿಡಿಯಬೇಕು. ಅವುಗಳು ತೋಟಕ್ಕೆ ನುಗ್ಗದ ರೀತಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಳೆದ ಒಂದು ವಾರದ ಹಿಂದೆ ಚೆಯ್ಯಂಡಾಣೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡರೂ ಕೂಡ ಯಾವುದೇ ಕ್ರಮವನ್ನು ಅರಣ್ಯ ಇಲಾಖೆ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಬೊವ್ವೇರಿಯಂಡ ಲವಕುಮಾರ್, ತೊಟಂಬೈಲು ಅನಂತ್ ಕುಮಾರ್, ಪವನ್ ಕುಮಾರ್ ‘ಶಕ್ತಿ’ಯೊಂದಿಗೆ ಮಾತನಾಡಿ, ನರಿಯಂದಡ ವ್ಯಾಪ್ತಿಯಲ್ಲಿ ಕಾಡಾನೆಗಳು ನಿರಂತರ ತೋಟಗಳಲ್ಲೆ ಬೀಡುಬಿಟ್ಟಿವೆ. ಬೆಳೆಗಳನ್ನು ತುಳಿದು ನಾಶಪಡಿಸಿದೆ. ಕಾಡಾನೆಗಳ ಹಾವಳಿಯಿಂದ ಭತ್ತ ಬೆಳೆಯುವುದನ್ನು ಕೂಡ ಸ್ಥಗಿತಗೊಳಿಸಿದ್ದೇವೆ. ಇದರಿಂದ ಅಂತರ್ಜಲ ಕುಸಿಯುವ ಸಾಧ್ಯತೆ ಕೂಡ ಇದೆ, ಇನ್ನಾದರೂ ಸರಕಾರ, ಶಾಸಕರು, ಸಂಸದರು ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ. -ಅಶ್ರಫ್