(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜು. ೧೯: ಪ್ರಸ್ತುತ ಸನ್ನಿವೇಶದಲ್ಲಿ ಭತ್ತದ ಕೃಷಿಗೆ ಅಷ್ಟಾಗಿ ಉತ್ತೇಜನ ಲಭಿಸುತ್ತಿಲ್ಲ. ಆದರೂ ದಕ್ಷಿಣ ಕೊಡಗಿನ ಕಿರುಗೂರು, ನಲ್ಲೂರು, ಬಾಳೆಲೆ, ಪೊನ್ನಪ್ಪಸಂತೆ ಸೇರಿದಂತೆ ಬಹುತೇಕ ರೈತರು ತಮ್ಮ ಭತ್ತದ ಗದ್ದೆಗಳನ್ನು ಪಾಳು ಬಿಡದ ರೀತಿಯಲ್ಲಿ ವರ್ಷಂಪ್ರತಿ ಎಷ್ಟೆ ಸಮಸ್ಯೆಯಾದರೂ ತಮ್ಮ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ನಡೆಸುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊಡಗಿನಾದ್ಯಂತ ಉತ್ತಮ ಮುಂಗಾರು ಪ್ರಾರಂಭವಾಗಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ ತಮ್ಮ ಭತ್ತದ ಗದ್ದೆಗಳನ್ನು ಉಳುಮೆ ಮಾಡಿ ಬೀಜ ಬಿತ್ತನೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದರು.

ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ರೈತರ ಭತ್ತದ ಗದ್ದೆಗಳು ನೀರಿನಿಂದ ತುಂಬಿ ಹೋಗಿದ್ದು, ಬೀಜ ಬಿತ್ತನೆ ಮಾಡಿದ್ದ ಗದ್ದೆಗಳು ಸಂಪೂರ್ಣ ಮುಳುಗಿ ಹೋಗಿವೆ. ಮಳೆಯ ರಭಸಕ್ಕೆ ಬಿತ್ತನೆ ಮಾಡಿದ್ದ ಭತ್ತದ ಬೀಜಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಇದರಿಂದ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಸ್ತುತ ಸಾಲಿನಲ್ಲಿ ಭತ್ತ ಬೆಳೆಯುವ ಕೃಷಿಕರು ಕೃಷಿ ಇಲಾಖೆಯಿಂದ ಭತ್ತದ ಬೀಜ ಖರೀದಿಸಿದ್ದು, ಇದರಲ್ಲಿ ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯಲ್ಲಿ ೧೯೯ ಕ್ವಿಂಟಾಲ್, ಹುದಿಕೇರಿ ಹೋಬಳಿಯಲ್ಲಿ ೧೨೦ ಕ್ವಿಂಟಾಲ್, ಶ್ರೀಮಂಗಲ ಹೋಬಳಿಯಲ್ಲಿ ೮೭ ಕ್ವಿಂಟಾಲ್ ಹಾಗೂ ಪೊನ್ನಂಪೇಟೆ ಹೋಬಳಿಯಲ್ಲಿ ೧೯೩ ಕ್ವಿಂಟಾಲ್ ಭತ್ತದ ಬೀಜಗಳನ್ನು ರೈತರು ಖರೀದಿಸಿದ್ದರು. ಕೃಷಿ ಇಲಾಖೆಯು ತುಂಗ, ಅತೀರ, ತನು, ಆರ್‌ಎನ್‌ಆರ್, ಇಂಟಾನ್ ಸೇರಿದಂತೆ ರೈತರಿಗೆ ಅಗತ್ಯವಿರುವ ಭತ್ತದ ಬೀಜಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರದಿAದ ಸಕಾಲದಲ್ಲಿ ವಿತರಣೆ ಮಾಡಿದ್ದರು.

ವಿವಿಧ ಭಾಗದ ರೈತರು ಬೀಜ ಬಿತ್ತನೆ ಕಾರ್ಯ ನಡೆಸಿದ್ದರು. ಹಲವು ರೈತರು ಮಳೆಯ ಏರಿಳಿತವನ್ನು ಗಮನಿಸಿ ಮಳೆ ಕಡಿಮೆಯಾದ ನಂತರ ಬೀಜ ಬಿತ್ತನೆಗೆ ತಯಾರಿ ನಡೆಸಿದ್ದರು. ಪೊನ್ನಂಪೇಟೆ ತಾಲೂಕಿನ ಕಿರುಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರು ಸಾಕಷ್ಟು ಸಂಖ್ಯೆಯಲ್ಲಿ ಭತ್ತದ ಕೃಷಿಯನ್ನು ಮಾಡುತ್ತಿದ್ದು ಈ ಭಾಗದಲ್ಲಿ ಬೀಜ ಬಿತ್ತನೆ ಮಾಡಿದ್ದರು. ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಬೀಜ ಬಿತ್ತನೆ ಗದ್ದೆಗಳಿಗೆ ನೀರು ತುಂಬಿ ಬಿತ್ತನೆ ಮಾಡಿದ ಬೀಜಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಕೃಷಿಯನ್ನೇ ಆಧಾರವಾಗಿಟ್ಟುಕೊಂಡಿರುವ ಈ ಭಾಗದ ಭತ್ತ ಬೆಳೆಯುವ ರೈತರು ಇದೀಗ ಎರಡನೇ ಬಾರಿ ತಮ್ಮ ಗದ್ದೆಗಳಲ್ಲಿ ಬೀಜ ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ. ಕಿರುಗೂರು ವ್ಯಾಪ್ತಿಯಲ್ಲಿ ೫೦೦ಕ್ಕಿಂತ ಹೆಚ್ಚಿನ ಎಕರೆಗಳಲ್ಲಿ ಭತ್ತದ ಕೃಷಿ ಚಟುವಟಿಕೆ ನಡೆಯುತ್ತಿದೆ. ಕೀರೆಹೊಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬರುವ ನೀರು ವರ್ಷಂಪ್ರತಿ ಈ ಭಾಗದ ಭತ್ತದ ಗದ್ದೆಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಇದರಿಂದ ಸಹಜವಾಗಿಯೇ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.