ಶನಿವಾರಸAತೆ, ಜು. ೧೨: ಸಮೀಪದ ಕೊಡ್ಲಿಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು ಒಬ್ಬ ವಿದ್ಯಾರ್ಥಿ ಸೇರಿದಂತೆ ೧೦ ಜನರಿಗೆ ಕಚ್ಚಿರುವ ಘಟನೆ ನಡೆದಿದೆ. ಇವರೆಲ್ಲರೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಧನಿಕಾ ಮಾಹಿತಿ ನೀಡಿದ್ದಾರೆ.

ನಾಯಿಗಳ ಹಾವಳಿ ಭಯದಲ್ಲಿ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಬಸ್ ನಿಲ್ದಾಣ, ಮುಖ್ಯ ರಸ್ತೆ, ಇತರ ರಸ್ತೆಗಳಲ್ಲಿ ತಿರುಗಾಡುವ ಸಾರ್ವಜನಿಕರ ಮೇಲೆ ಏಕಾಏಕಿ ಎರಗಿ ನಾಯಿಗಳು ಕಚ್ಚುತ್ತಿದ್ದು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ವಾಯು ವಿಹಾರಕ್ಕೆ ಹೋಗುವ ಮಹಿಳೆಯರು, ವೃದ್ಧರು ಎಚ್ಚರಿಕೆಯಿಂದ ತಿರುಗಾಡುವಂತಾಗಿದೆ. ಮುಖ್ಯವಾಗಿ ಉದ್ಯೋಗ ನಿಮಿತ್ತ ಮುಂಜಾನೆಯ ಕತ್ತಲಲ್ಲೆ ತೆರಳುವ ಹಾಗೂ ರಾತ್ರಿ ತಡವಾಗಿ ಮನೆಗೆ ಮರಳುವವರು ಅಂಗೈಯಲ್ಲಿ ಜೀವ ಹಿಡಿದು ನಾಯಿ ಭಯದಿಂದಲೇ ಧಾವಿಸುವ ದೃಶ್ಯ ಸಾಮಾನ್ಯವಾಗಿದೆ ಎಂದು ಕರ್ನಾಟಕ ದಲಿತ ಸಂಘದ ಅಧ್ಯಕ್ಷ ಸೋಮು ಹಾಗೂ ಇತರ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಗಳಲ್ಲಿ ಬೀದಿನಾಯಿಗಳ ಉಪಟಳ ವಿಪರೀತವಾಗಿದ್ದರೂ, ಗ್ರಾಮ ಪಂಚಾತಿ ಮಾತ್ರ ಮೌನ ವ್ರತ ಆಚರಿಸುತ್ತಿದೆ. ನಾಯಿಗಳ ಹಾವಳಿ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. - ಶ.ಗ. ನಯನತಾರ