ಮಡಿಕೇರಿ, ಜು. ೧೨: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಾಗೂ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಹೆಸರು ತಳಕು ಹಾಕಿಕೊಂಡಿದೆ. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಜೊತೆಗೆ ಇವೆರಡು ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಪತ್ನಿಗೆ ಅವರ ಅಣ್ಣ ದಾನದ ರೂಪದಲ್ಲಿ ಜಾಗವನ್ನು ನೀಡಿ ಮೂಡ ಅದನ್ನು ಸ್ವಾಧೀನಪಡಿಸಿ ಕೊಂಡು ‘ಡಿನೋಟಿಫೈ’ ಮಾಡಿದೆ. ಅದಕ್ಕೆ ಪರ್ಯಾಯವಾಗಿ ಸೈಟ್ಗಳನ್ನು ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದು, ಓರ್ವ ಪ್ರಭಾವಿ ರಾಜಕಾರಣಿಯ ಜಾಗವನ್ನು ಈ ರೀತಿ ವಶಕ್ಕೆ ಪಡೆಯಲು ಸಾಧ್ಯವೆ? ಎಂದು ಪ್ರಶ್ನಿಸಿದ ಅವರು, ಈ ಕುರಿತು ಸಮಗ್ರ ತನಿಖೆಯ ಅವಶ್ಯಕತೆ ಇದೆ. ಸರಕಾರದ ಗಮನಕ್ಕೆ ಬಾರದೆ
(ಮೊದಲ ಪುಟದಿಂದ) ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವೆ ಇಲ್ಲ. ತಪ್ಪು ಮಾಡಿಲ್ಲ ಎಂದಾದರೆ ಸಿಬಿಐಗೆ ವಹಿಸಲು ಹಿಂಜರಿಕೆ ಬೇಡ. ತನಿಖೆಯಾಗುವ ತನಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಪ್ರಕರಣದಿಂದ ಹೊರಬಂದರೆ ಮತ್ತೇ ಮುಖ್ಯಮಂತ್ರಿಯಾಗಿ ಎಂದರು.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ರೂ. ೧೮೭ ಕೋಟಿ ಅಕ್ರಮ ವರ್ಗಾವಣೆ ನಡೆದಿದ್ದು, ಸ್ವತಃ ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೆ ಈ ಅಕ್ರಮ ನಡೆದಿರಲು ಸಾಧ್ಯವಿಲ್ಲ.
ಆರ್ಥಿಕ ಇಲಾಖೆ ಅನುಮತಿ ಮೇರೆಯೇ ಹಣ ವರ್ಗಾವಣೆಯಾಗುತ್ತದೆ. ಇದರಲ್ಲೂ ಸಿದ್ದರಾಮಯ್ಯ ಭಾಗಿಯಾಗಿರುವ ಅನುಮಾನವಿದೆ ಎಂದು ಬೋಪಯ್ಯ ಆರೋಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸರಕಾರದ ತಪ್ಪಿನ ವಿರುದ್ಧ ಪ್ರತಿಭಟನೆ ನಡೆಸಿದರೆ ಅದನ್ನು ಹತ್ತಿಕುವ ಕೆಲಸ ರಾಜ್ಯ ಸರಕಾರದಿಂದ ನಡೆಯುತ್ತಿದೆ. ವಾಲ್ಮೀಕಿ ನಿಗಮದಲ್ಲಿ ನಡೆದ ಪ್ರಕರಣದಲ್ಲಿ ಸಚಿವ ಹಾಗೂ ನಿಗಮದ ಅಧ್ಯಕ್ಷನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ ಅವರು, ವಿಪಕ್ಷ ಪ್ರತಿಭಟನೆ ನಡೆಸಿದರೆ ಕಾಂಗ್ರೆಸ್ ಅದರ ಸ್ವರೂಪವನ್ನು ಬದಲಿಸಿ ರಾಜಕೀಯ ಲಾಭ ಪಡೆಯುತ್ತದೆ. ಪ್ರತಿಭಟನೆಗೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ನಾಯಕರ ಬಂಧನ ಮಾಡಿರುವುದು ಖಂಡನೀಯ. ಕಾಂಗ್ರೆಸ್ ಸರಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲೀರ ಚಲನ್ ಕುಮಾರ್, ಮಹೇಶ್ ಜೈನಿ, ವಕ್ತಾರ ಬಿ.ಕೆ. ಅರುಣ್ ಕುಮಾರ್ ಹಾಜರಿದ್ದರು.