ಜೂನ್ ೨೫ ‘ಸಂವಿಧಾನ ಹತ್ಯೆ ದಿನ'ವಾಗಿ ಆಚರಣೆ

ನವದೆಹಲಿ, ಜು. ೧೨: ಕೇಂದ್ರ ಸರ್ಕಾರ ಜೂನ್ ೨೫ನ್ನು ಸಂವಿಧಾನ ಹತ್ಯೆ ದಿನ ಎಂದು ಘೋಷಿಸಿದೆ. ಈ ಸಂಬAಧ ಕೇಂದ್ರ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ. ಇಂದಿರಾಗಾAಧಿ ಪ್ರಧಾನಿಯಾಗಿದ್ದಾಗ ೧೯೭೫ರ ಜೂನ್ ೨೫ ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಹೀಗಾಗಿ ಆ ದಿನವನ್ನು ಸಂವಿಧಾನ ಹತ್ಯೆ ದಿನವಾಗಿ ಆಚರಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ೧೯೭೫ರ ಜೂನ್ ೨೫ ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸರ್ವಾಧಿಕಾರಿ ಮನಸ್ಥಿತಿಯನ್ನು ಪ್ರದರ್ಶಿಸಿ, ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಭಾರತದ ಪ್ರಜಾಪ್ರಭುತ್ವದ ಆತ್ಮವನ್ನೇ ಕತ್ತು ಹಿಸುಕಿದ್ದರು. ಲಕ್ಷಗಟ್ಟಲೆ ಜನರನ್ನು ವಿನಾಕಾರಣ ಜೈಲಿಗೆ ಹಾಕಲಾಯಿತು ಮತ್ತು ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲಾಯಿತು. ಭಾರತ ಸರ್ಕಾರವು ಪ್ರತಿ ವರ್ಷ ಜೂನ್ ೨೫ ಅನ್ನು ‘ಸಂವಿಧಾನ ಹತ್ಯೆ ದಿನ' ಎಂದು ಆಚರಿಸಲು ನಿರ್ಧರಿಸಿದೆ. ೧೯೭೫ರ ತುರ್ತುಪರಿಸ್ಥಿತಿಯ ಅಮಾನವೀಯ ನೋವನ್ನು ಸಹಿಸಿಕೊಂಡವರೆಲ್ಲರ ಅಪಾರ ಕೊಡುಗೆಯನ್ನು ಈ ದಿನ ನೆನಪಿಸುತ್ತದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದ ಉದ್ದೇಶವು ಸರ್ವಾಧಿಕಾರಿ ಸರ್ಕಾರದ ಅಸಂಖ್ಯಾತ ಚಿತ್ರಹಿಂಸೆ ಮತ್ತು ದಬ್ಬಾಳಿಕೆಯನ್ನು ಎದುರಿಸುತ್ತಿದ್ದರೂ ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸಲು ಹೋರಾಡಿದ ಲಕ್ಷಾಂತರ ಜನರ ಹೋರಾಟವನ್ನು ಗೌರವಿಸುವುದಾಗಿದೆ. ‘ಸಂವಿಧಾನ ಹತ್ಯೆ ದಿನ' ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಪ್ರತಿಯೊಬ್ಬ ಭಾರತೀಯನೊಳಗೆ ವೈಯಕ್ತಿಕ ಸ್ವಾತಂತ್ರ‍್ಯದ ಅಮರ ಜ್ವಾಲೆಯನ್ನು ಜೀವಂತವಾಗಿಡಲು ಕೆಲಸ ಮಾಡುತ್ತದೆ, ಇದರಿಂದ ಭವಿಷ್ಯದಲ್ಲಿ ಕಾಂಗ್ರೆಸ್‌ನAತಹ ಯಾವುದೇ ಸರ್ವಾಧಿಕಾರಿ ಮನಸ್ಥಿತಿ ಪುನರಾವರ್ತನೆಯಾಗುವುದಿಲ್ಲ ಎಂದು ಹೇಳಿದೆ.

ತಮಿಳುನಾಡಿಗೆ ಕಾವೇರಿ ನೀರು: ನಿರ್ದೇಶನದ ವಿರುದ್ಧ ಮೇಲ್ಮನವಿ

ಬೆಂಗಳೂರು, ಜು. ೧೨: ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ರಾಜ್ಯಕ್ಕೆ ನೀಡಿರುವ ನಿರ್ದೇಶನದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾವೇರಿ ನದಿ ಪಾತ್ರದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಜುಲೈ ೧೪ರಂದು ಸರ್ವಪಕ್ಷಗಳ ಸಭೆ ನಡೆಸಿ ರಾಜ್ಯದ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. "ಈ ಬಾರಿ ಸಾಮಾನ್ಯ ಮಳೆಯಾಗುವ ಮುನ್ಸೂಚನೆಗಳ ಹೊರತಾಗಿಯೂ, ಒಳಹರಿವಿನಲ್ಲಿ ಇದುವರೆಗೆ ಶೇ. ೨೮ ರಷ್ಟು ಕೊರತೆಯಿದೆ. ಇದನ್ನು ನಾವು ಸಿಡಬ್ಲ್ಯೂಆರ್‌ಸಿ ಮುಂದೆ ಸ್ಪಷ್ಟವಾಗಿ ಹೇಳಿದ್ದೇವೆ. ಅಲ್ಲದೆ, ಜುಲೈ ಅಂತ್ಯದವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ನಾವು ವಿನಂತಿಸಿದ್ದೇವೆ. ಆದರೂ ಜುಲೈ ೧೨ ರಿಂದ ಪ್ರತಿದಿನ ಒಂದು ಟಿಎಂಸಿ ನೀರು ಬಿಡುವಂತೆ ಸಿಡಬ್ಲ್ಯುಆರ್‌ಸಿ ಸೂಚಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮೂಡಾ ಹಗರಣ ಸಂಬAಧ ಮೈಸೂರು ಚಲೋ: ಹಲವು ನಾಯಕರು ಪೊಲೀಸರ ವಶಕ್ಕೆ!

ಬೆಂಗಳೂರು, ಜು. ೧೨: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮೂಡಾ) ಅಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್ ನೀಡಲಾಗಿದೆ ಎಂದು ಆರೋಪಿಸಿ ಮೈಸೂರಿಗೆ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಮಾರ್ಗ ಮಧ್ಯದಲ್ಲಿಯೇ ವಶಕ್ಕೆ ಪಡೆದರು. ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಬಿಜೆಪಿ ಬೃಹತ್ ರ‍್ಯಾಲಿ ನಡೆಸುವ ಮೂಲಕ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯೋಜಿಸಲಾಗಿತ್ತು. ಆದರೆ, ಮೈಸೂರು ರಸ್ತೆಯ ಕದಂಬ ಹೊಟೇಲ್ ಬಳಿ ಪ್ರತಿಭಟನೆ ನಡೆಸಿದ ವಿಜಯೇಂದ್ರ ಮತ್ತಿತರ ಬಿಜೆಪಿ ನಾಯಕರು ಮುಂದಕ್ಕೆ ತೆರಳಲು ಪೊಲೀಸರು ಅವಕಾಶ ನೀಡಲಿಲ್ಲ. ಅವರನ್ನು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದರು. ನಂತರ ಕಣಿಮಿಣಕೆಯ ಟೋಲ್‌ಗೇಟ್ ಬಳಿ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಎಕ್ಸ್ಪ್ರೆಸ್ ಹೈವೇ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.