ಕೂಡಿಗೆ, ಜು. ೬: ಕೂಡು ಮಂಗಳೂರು ಪ್ರೌಢಶಾಲೆಯಲ್ಲಿ ಶಾಲೆಯ ರಾಮಾನುಜನ್ ಗಣಿತ ಸಂಘದ ಆಶ್ರಯದಲ್ಲಿ ಕುಶಾಲನಗರ ಬ್ರೆöÊನ್ ಅಕಾಡೆಮಿ ವತಿಯಿಂದ ಮಕ್ಕಳಿಗೆ ಆರಂಭಿಸಲಾದ ಅಬಾಕಸ್ ಕಲಿಕಾ ತರಬೇತಿಗೆ ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಚಾಲನೆ ನೀಡಿದರು.
ಅಬಾಕಸ್ ತರಬೇತಿ ಪಡೆಯಲಿರುವ ಶಾಲೆಯ ೧೦೦ ಮಕ್ಕಳಿಗೆ ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ವತಿಯಿಂದ ಸಾಧನಾ ಸಲಕರಣೆ ಮತ್ತು ಅಭ್ಯಾಸ ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಅಬಾಕಸ್ ಕಲಿಕೆಯ ಸಾಧನ ಸಲಕರಣೆ ವಿತರಿಸಿ ಮಾತನಾಡಿದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಬುದ್ಧಿಮತ್ತೆಯ ಅಬಾಕಸ್ ಕಲಿಕೆಯು ಮಕ್ಕಳಲ್ಲಿ ಏಕಾಗ್ರತೆ, ಕ್ರಿಯಾಶೀಲತೆಯೊಂದಿಗೆ ಸೃಜನಶೀಲತೆ ಬೆಳೆಸುವ ಮೂಲಕ ಅವರ ಬುದ್ಧಿಶಕ್ತಿಯನ್ನು ಉದ್ದೀಪನಗೊಳಿಸಲು ತುಂಬಾ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಅಬಾಕಸ್ ಕಲಿಕೆಯ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಜ್ಞಾನಾಭಿವೃದ್ಧಿ ವೃದ್ಧಿಸಿಕೊಳ್ಳಬೇಕು ಎಂದರು.
ತಮ್ಮ ಸಹಕಾರ ಸಂಘದ ವತಿಯಿಂದ ಹಸಿರು ಯೋಜನೆಯಡಿ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಲಿನ ಶಾಲಾ-ಕಾಲೇಜುಗಳಲ್ಲಿ ೭೦೦ ಅರಣ್ಯ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ ಕೂಡ ಈ ಶಾಲೆ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯವನ್ನು ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ಶರವಣಕುಮಾರ್ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಗ್ರಾಮಾಂತರ ಶಾಲೆಯ ಮಕ್ಕಳಿಗೆ ಅಬಾಕಸ್ ಕಲಿಕಾ ತರಬೇತಿಗೆ ಪೂರಕವಾಗಿ ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ವತಿಯಿಂದ ಮಕ್ಕಳಿಗೆ ಸಾಧನಾ ಸಲಕರಣೆಗಳನ್ನು ನೀಡುವ ಮೂಲಕ ನಮ್ಮ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಬಾಕಸ್ ಕಲಿಕಾ ತರಬೇತಿಯ ಮಹತ್ವ ಕುರಿತು ಮಾತನಾಡಿದ ಕುಶಾಲನಗರ ಸ್ಮಾರ್ಟ್ ಬ್ರೆöÊನ್ ಅಬಾಕಸ್ ಅಕಾಡೆಮಿಯ ಮುಖ್ಯಸ್ಥೆ ಕುಸುಮ ಆರ್. ರಾಜ್, ಇದು ಮೆದುಳಿನ ಅಭಿವೃದ್ಧಿ, ತಾರ್ಕಿಕ ಚಿಂತನೆ ಮತ್ತು ಸಂಖ್ಯಾತ್ಮಕ ಸಂಸ್ಕರಣಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಇದರ ಜೊತೆಗೆ ಅವರಲ್ಲಿ ವಿವಿಧ ಕಲಿಕೆಯ ಅರಿವಿನ ಸಾಮರ್ಥ್ಯಗಳನ್ನು ಉತ್ತೇಜಿಸುತ್ತದೆ ಎಂದರು.
ಸಂಘದ ನಿರ್ದೇಶಕರಾದ ಎಂ.ಎA. ಶಾಹಿರ್, ವಿ.ಸಿ. ಅಮೃತ್, ಕೆ.ಪಿ. ಶರತ್, ಕೆ.ಎನ್. ಸುರೇಶ್, ಕೃತಿಕ ಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಡಿ. ಶ್ರೀಜಿತ್, ವ್ಯವಸ್ಥಾಪಕ ಆರ್. ರಾಜು, ಸಿಬ್ಬಂದಿ ಎಂ.ಜಿ. ಬೊಳ್ಳಮ್ಮ, ದಾನಿ ಸೈಜನ್ ಪೀಟರ್ ಇತರರು ಇದ್ದರು. ಅಬಾಕಸ್ ಕಲಿಕಾ ಅಭ್ಯಾಸದ ಸಂಪನ್ಮೂಲ ಶಿಕ್ಷಕಿಯರಾದ ಕಲ್ಪನ, ಕೆ.ಟಿ. ಲಾವಣ್ಯ ಇದ್ದರು.
ಅಬಾಕಸ್ ಲೆಕ್ಕ ಪ್ರದರ್ಶನದಲ್ಲಿ ತರಬೇತಿನಿರತ ವಿದ್ಯಾರ್ಥಿಗಳಾದ ಲಿಖಿತ, ಸೋನು ಮತ್ತು ಆಕಾಂಕ್ಷ ಅಬಾಕಸ್ ಕಲಿಕೆಯ ಕುರಿತು ಬಾಯ್ದೆರೆ ಲೆಕ್ಕ/ ಸಮಸ್ಯೆ ಗಳನ್ನು ಬಿಡಿಸಿ ಮೆಚ್ಚುಗೆ ಪಡೆದರು. ಅಬಾಕಸ್ ತರಬೇತಿಯ ಮಹತ್ವ ಕುರಿತು ಶಾಲಾ ಗಣಿತ ಶಿಕ್ಷಕಿ ಬಿ.ಎನ್. ಸುಜಾತ ಮಾಹಿತಿ ನೀಡಿದರು. ಶಿಕ್ಷಕ ಎಂ.ಟಿ. ದಯಾನಂದ ಪ್ರಕಾಶ್ ವಂದಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.