ವೀರಾಜಪೇಟೆ, ಜು. ೪: ಸಮೀಪದ ಕೆದಮುಳ್ಳೂರು ಗ್ರಾಮದ ತೆರ್ಮೆಮೊಟ್ಟೆಯಲ್ಲಿ ರಸ್ತೆ ಅಭಿವೃದ್ಧಿ ಕಾಣದೆ ವರ್ಷಗಳೇ ಕಳೆದು ಹೋಗಿವೆ, ಜನ ಪ್ರತಿನಿಧಿಗಳು ಸಹ ರಸ್ತೆ ಅಭಿವೃದ್ಧಿ ಬಗ್ಗೆ ಮೌನ ವಹಿಸಿದ್ದಾರೆ. ಈ ಪ್ರದೇಶದಲ್ಲಿ ೫೦೦ಕ್ಕೂ ಹೆಚ್ಚು ಮನೆಗಳಿದ್ದು ಈ ರಸ್ತೆಯನ್ನೇ ಅವಲಂಬಿಸಿಕೊAಡಿದ್ದಾರೆ . ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ರಸ್ತೆಯ ತುಂಬಾ ಗುಂಡಿಗಳಿದ್ದು ಯಾವ ಕಡೆ ಹೋಗಬೇಕು ಎಂದು ತಿಳಿಯದು. ಪಾದಚಾರಿಗಳಿಗೆ ವಾಹನಗಳು ಹೋದ ನಂತರವೆ ನಡೆಯಲು ಸಾಧ್ಯ. ಇಲ್ಲದಿದ್ದರೆ ಗುಂಡಿಯ ನೀರು ಮೈ ಮೇಲೆ ಇರುತ್ತದೆ.!

ಕೆದಮುಳ್ಳೂರು ಒಂದು ಭಾಗದಲ್ಲಿ ಶಾಸಕರು ರಸ್ತೆ ಅಭಿವೃದ್ಧಿಪಡಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಭಾಗದಲ್ಲಿಯೂ ರಸ್ತೆ ದುರಸ್ತಿ ಮಾಡುವಂತೆ ತೆರ್ಮೆಮೊಟ್ಟೆ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ. ಕೆದಮುಳ್ಳೂರು ತೆರ್ಮೆಮೊಟ್ಟೆ ಜಂಕ್ಷನ್‌ವರೆಗೆ ಎರಡು ಬಸ್‌ಗಳು ಬರುತ್ತವೆ, ಆದರೆ ಗ್ರಾಮದೊಳಗೆ ಬರುವುದಿಲ್ಲ. ಇದರಿಂದ ೬ ಕಿಮೀ ವರೆಗೆ ನಡೆದೇ ಹೋಗಬೇಕು. ಶಾಲಾ-ಕಾಲೇಜುಗಳ ಮಕ್ಕಳಿಗೆ, ವೃದ್ಧರಿಗೆ, ತುರ್ತು ಚಿಕಿತ್ಸೆಗೆ, ನಗರದಲ್ಲಿ ಕೆಲಸ ಮಾಡುವವರಿಗೆ. ಸಮಯದ ಕೊರತೆ ಉಂಟಾಗುತ್ತದೆ, ರಸ್ತೆ ಅಭಿವೃದ್ಧಿಪಡಿಸಿ ತೆರ್ಮೆಮೊಟ್ಟೆ ಗ್ರಾಮದೊಳಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದಂತೆ ಆಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಡುತಿದ್ದಾರೆ.