ಮಡಿಕೇರಿ ಜು. ೪ : ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್ ಮತ್ತು ಆಂಧ್ರದ "ಸಾಫ್ಟ್ ಮನಿ" ಫಲಾನುಭವಿಗಳು ಸರ್ಕಾರ ನೀಡುತ್ತಿರುವ ಬಡ್ಡಿ ರಹಿತ ಸಾಲದ ಮೊತ್ತವನ್ನು ಕೊಡವ ಲ್ಯಾಂಡ್ನ ಕೃಷಿ ಭೂಮಿ ಖರೀದಿಗಾಗಿ ಬಳಕೆ ಮಾಡುತ್ತಿದ್ದು, ಕೊಡವರ ಹಿತದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
"ಸಾಫ್ಟ್ ಮನಿ" ಫಲಾನುಭವಿಗಳು ವಾಣಿಜ್ಯ ದುಸ್ಸಾಹಸಕ್ಕಾಗಿ ಕೊಡಗಿನ ಕೃಷಿ ಭೂಮಿಯನ್ನು ಯುದ್ಧೋಪಾದಿಯಲ್ಲಿ ಖರೀದಿಸುತ್ತಿದ್ದಾರೆ ಮತ್ತು ನಮ್ಮ ಪರ್ವತಗಳು, ಅರಣ್ಯ ಪ್ರದೇಶಗಳು, ಸಸ್ಯ ಸಂಕುಲ ಮತ್ತು ಜಲಮೂಲಗಳನ್ನು ನಾಶಪಡಿಸಲಾಗುತ್ತಿದೆ. ಇದು ಕಾವೇರಿ ಜಲಾನಯನ ಪ್ರದೇಶದ ನರ ಕೇಂದ್ರ ಮತ್ತು ನೀರಿನ ತಳಹದಿಯ ಜಲಗರ್ಭಕ್ಕೆ ಹಾನಿಯುಂಟುಮಾಡುತ್ತಿದೆ ಎಂದಿದ್ದಾರೆ.
ತಿರುಪತಿ ದೇವಸ್ಥಾನಂ ಮಂಡಳಿಯ ಸಾವಿರಾರು ಕೋಟಿ ಹಣವನ್ನು ಕೊಡವ ಲ್ಯಾಂಡ್ನಲ್ಲಿ ಭೂಮಿಯನ್ನು ಖರೀದಿಸಲು ಬಡ್ಡಿರಹಿತ "ಸಾಫ್ಟ್ ಮನಿ" ಎಂದು ತೆಲುಗು ಜನರಿಗೆ ನೀಡಲಾಗುತ್ತಿದೆ. ಬಹಳಷ್ಟು ತೆಲುಗು ಜನರು ಕೊಡವರ ಪ್ರಾಚೀನ ಭೂಮಿಗೆ ಅಸಹಜ ಬೆಲೆಗಳನ್ನು ಪಾವತಿಸಿ ಖರೀದಿಸಲು ಪ್ರಾರಂಭಿಸಿದ್ದಾರೆ. ಕೊಡವ ಲ್ಯಾಂಡ್ ನ ವಿಹಂಗಮ ಬೆಟ್ಟಗಳನ್ನು ಅಗೆದು ನಮ್ಮ ಜೀವನಾಡಿ, ದೈವಿಕ ಮಾತೃ ನದಿ ಕಾವೇರಿಯ ದೀರ್ಘಕಾಲಿಕ ನೀರಿನ ಮೂಲಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಡವಲ್ಯಾಂಡ್ ಯೋಧರ ತೂಗು ತೊಟ್ಟಿಲು, ಕೊಡವರು ಅತಿ ದೇಶಭಕ್ತರು ಮತ್ತು ಅಪ್ರತಿಮ ರಾಷ್ಟಿçÃಯತೆಯ ಸಮುದಾಯದವರು. ರಾಷ್ಟçದ ಹಿತದೃಷ್ಟಿಯಿಂದ ನಿಮ್ಮ ಹಸ್ತಕ್ಷೇಪದ ಮೂಲಕ ಕೊಡವರ ಅಸ್ತಿತ್ವವನ್ನು ಸಾಂಪ್ರದಾಯಿಕ ಕೊಡವ ತಾಯ್ನಾಡಿನಲ್ಲಿ ಶಾಶ್ವತವಾಗಿ ಮುಂದುವರಿಸಲು ಅನುಮೋದಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೊಡವಲ್ಯಾಂಡ್ ಪಶ್ಚಿಮ ಘಟ್ಟಗಳ ವಲಯದ ಪರ್ವತ ಪ್ರದೇಶಗಳಲ್ಲಿ ನೆಲೆಗೊಂಡಿದೆ, ಇದು ಪ್ರಪಂಚದ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ ಆಗಿದೆ. ೧೯೫೬ ರವರೆಗೆ ಕೂರ್ಗ್ ಭಾರತದ ಪ್ರತ್ಯೇಕ, ಉತ್ತಮ ಆಡಳಿತ ಮತ್ತು ಅತ್ಯಂತ ಸಮಚಿತ್ತದಿಂದ ಆಳ್ವಿಕೆ ನಡೆಸಿದ ರಾಜ್ಯವಾಗಿತ್ತು. ಇಡೀ ಕೊಡವ ಪ್ರದೇಶವು ಕುಲದೇವತೆಗಳು, ಗ್ರಾಮ ದೇವತೆಗಳು ಮತ್ತು ನಾಡ್ಗಳ ದೇವತೆಗಳ (ಗ್ರಾಮಗಳ ಸಮೂಹ) ದೈವತ್ವದಿಂದ ತುಂಬಿದೆ. ಇದನ್ನು ಕಳೆದುಕೊಳ್ಳಲು ಕೊಡವರಾದ ನಾವುಗಳು ತಯಾರಿಲ್ಲ; ಆದ್ದರಿಂದ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯ (ಟಿಟಿಡಿ) ನಿಧಿಯನ್ನು ಇಂದಿನ ದಿನಮಾನದ ಅಗತ್ಯವಾಗಿರುವ ಕಾಶ್ಮೀರದಲ್ಲಿ ಜಮೀನುಗಳನ್ನು ಖರೀದಿಸಲು ಬಳಕೆ ಮಾಡಬೇಕೆಂದು ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ.